ನವದೆಹಲಿ: ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ 78,291 ಹುದ್ದೆಗೆಳು ಖಾಲಿ ಇವೆ ಎಂದು ರಕ್ಷಣಾ ಸಚಿವಾಲಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಭಾರತೀಯ ಸೇನೆಯ ಅಧಿಕಾರಿ ವೃಂದ್ಧದಲ್ಲಿ 50,312 ಹುದ್ದೆಗಳಿಗೆ 42,913 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 7,399 ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ. ನೌಕಾ ದಳದಲ್ಲಿ 10,012 ಹುದ್ದೆಗಳಿದ್ದು, 11,557 ಹುದ್ದೆಗಳಲ್ಲಿ 1,545 ಸ್ಥಾನಗಳು ಉಳಿದಿವೆ. ವಾಯುಪಡೆಯ ಒಟ್ಟು 12,625 ಅಧಿಕಾರಿಗಳ ಹುದ್ದೆಯಲ್ಲಿ ಕೇವಲ 483 ಮಾತ್ರ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.
ಮೂರು ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳ ಕೇಳಗಿರುವ ಸಿಬ್ಬಂದಿ ಶ್ರೇಣಿಯಲ್ಲಿ (ಪಿಬಿಒಆರ್) ವಾಯುಪಡೆ ಮತ್ತು ನೌಕಾ ಪಡೆಯ ಕೆಳ ಹಂತದ ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆಯಲ್ಲಿ ಈಗಾಗಲೇ ತಿಳಿಸಲಾಗಿದೆ ಎಂದು ಸಂಸತ್ ಮುಂದಿಟ್ಟರು.
ಭಾರತೀಯ ಸೇನೆಯ ಅಧಿಕಾರಿಗಳ ವರ್ಗದಲ್ಲಿನ ಕೆಳ ಹಂತದಲ್ಲಿ ಒಟ್ಟು 12,23,381 ಹುದ್ದೆಗಳಿವೆ. ಈ ಪೈಕಿ 11,85,146 ಮಂದಿ ನೇಮಕಗೊಂಡಿದ್ದು, ಪ್ರಸ್ತುತ 38,235 ಉದ್ಯೋಗಿಗಳ ಕೊರತೆ ಇದೆ. ನೌಕಾಪಡೆಯಲ್ಲಿ ಒಟ್ಟು 74,046 ಅನುಮೋದಿತ ಹುದ್ದೆಗಳಿದ್ದು, ಇದರಲ್ಲಿ 57,240 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 16,806 ಹುದ್ದೆಗಳು ಖಾಲಿ ಎಂದು ನಾಯಕ್ ಮಾಹಿತಿ ನೀಡಿದ್ದಾರೆ.
ಭಾರತೀಯ ವಾಯುಪಡೆಯಲ್ಲಿ 13,823 ಹುದ್ದೆಗಳು ಖಾಲಿ ಇವೆ. ಒಟ್ಟು 1,42,917 ಹುದ್ದೆಗಳಲ್ಲಿ ಅಧಿಕಾರಿಗಳ ಕೇಳವರ್ಗದ 1,29,094 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ನಿವೃತ್ತಿ, ಅವಧಿ ಪೂರ್ವ ಸ್ವಯಂ ನಿವೃತ್ತಿ, ಗಾಯ ಸೇರಿದಂತೆ ವಿವಿಧ ಕಾರಣಗಳಿಂದ 78,291 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.