ಬೆಂಗಳೂರು: ಪ್ರಮುಖವಾಗಿ ಆರು ವಲಯಗಳಾಗಿ ವಿಂಗಡಿಸಿ ಮಂಡಿಸಲಾದ ರಾಜ್ಯ ಬಜೆಟ್ನಲ್ಲಿ ಸಂಸ್ಕತಿ - ಪರಂಪರೆ - ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಅನೇಕ ಅನುದಾನವನ್ನ ನೀಡಲಾಗಿದೆ.
ಬಸವ ಕಲಾಣ್ಯದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ. ಚಿತ್ರದುರ್ಗದ ಮುರುಘಾ ಮಠದಲ್ಲಿ ಬಸವೇಶ್ವರರ 325 ಅಡಿ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ರೂ.ಮೀಸಲಿಡಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ 1 ಕೋಟಿ ರೂ.ಮೀಸಲು. ಬೆಂಗಳೂರಿನಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ವಿವೇಕಾನಂದ ಯುವಕೇಂದ್ರ ಸ್ಥಾಪನೆ ಹಾಗೂ ಕ್ರೀಡೆ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ. ಅನಂತ ಕುಮಾರ್ ಪ್ರತಿಷ್ಠಾನ ಸ್ಥಾಪನೆಗೆ 20 ಕೋಟಿ ರೂ. ಅನುದಾನ ನೀಡಲಾಗಿದೆ.
ಅಮರ ಶಿಲ್ಪಿ ಜಕಣಾಚಾರಿ ಸ್ಮರಣಾ ದಿನಾಚರಣೆಯನ್ನು ಜ.1ಕ್ಕೆ ನಿಗದಿ. ರವೀಂದ್ರ ಕಲಾಕ್ಷೇತ್ರ ಮಾದರಿಯ ಕಟ್ಟಡಗಳನ್ನು ನಗರದ ನಾಲ್ಕು ಕಡೆ ಸ್ಥಾಪಿಸಲು 60 ಕೋಟಿ ರೂ. ಅನುದಾನ. ಬೆಂಗಳೂರು ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ 100 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ 66 ಕೋಟಿ ರೂ.ಮೀಸಲಿರಿಸಲಾಗಿದೆ.
ಅಲ್ಲದೇ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ರೂ.ಮೀಸಲು. ರಾಜ್ಯದ ಎಲ್ಲ ಮಠಗಳ ಅಭಿವೃದ್ಧಿಗೆ ಅಗತ್ಯ ಧನಸಹಾಯ-ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ತೀರ್ಥಕ್ಷೇತ್ರ ಮಾಡಲು "ಜೀವನ ಚೈತ್ರ ಯಾತ್ರೆ" ಯೋಜನೆಗೆ 20 ಕೋಟಿ ರೂ. ಅನುದಾನ. ಮಂತ್ರಾಲಯ, ತುಳಜಾಪುರ, ಫಂಡರಾಪುರ, ವಾರಣಾಸಿ, ಉಜ್ಜಯಿನಿ, ಶ್ರೀಶೈಲ ದೇವಾಲಯಗಳ ಅತಿಥಿ ಗೃಹಗಳ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಇರಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಚಿತ್ರದುರ್ಗದ ನಿವಾಸ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ 5 ಕೋಟಿ. ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆಗೆ 50 ಲಕ್ಷ ರೂ. ಅನುದಾನ. ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಫಿಲ್ಮಂ ಸಿಟಿ ಸ್ಥಾಪಿಸಲು 500 ಕೋಟಿ ರೂ.ಮೀಸಲು. ಕೊಪ್ಪಳ ಜಿಲ್ಲೆ ಗಂಗಾವತಿ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ 20 ಕೋಟಿ ರೂ. ಅನುದಾನ ನೀಡಲಾಗಿದೆ.
ಐತಿಹಾಸಿಕ ಪ್ರವಾಸಿತಾಣ ಬಾದಾಮಿ ಸಮಗ್ರ ಅಭಿವೃದ್ಧಿಗೆ 25 ಕೋಟಿ ರೂ.ಮೀಸಲು. ಪ್ರವಾಸಿಗರನ್ನು ಆಕರ್ಷಿಸಲು ರೂಪಿಸಿರುವ ಕರ್ನಾಟಕ ಪ್ರವಾಸೋದ್ಯಮ ಟಾಸ್ಕ್ ಪೋರ್ಸ್ಗೆ 100 ಕೋಟಿ ಮೀಸಲಿರಿಸಿದ್ದು. ರಾಜ್ಯದ ಒಟ್ಟಾರೆ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ಮೀಸಲಿರಿಸಲಾಗಿದೆ.
2020-21ನೇ ಸಾಲಿನಲ್ಲಿ ಸಂಸ್ಕೃತಿ- ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಒಟ್ಟು 4,552 ಕೋಟಿ ರೂ. ಮೀಸಲಿಟ್ಟಿದ್ದು, ಅಳಿವಿನಂಚಿತ ವನ್ಯಜೀವಿ ಪ್ರಭೇದಗಳ ಸಂರಕ್ಷಣೆಗೆ ಹಾಗೂ ಜೀವ ವೈವಿದ್ಯತೆ ಕಾಪಾಡಲು 5 ಕೋಟಿ ರೂ. ಹಾಗೂ ಶಿವಮೊಗ್ಗದ ತಾವರೆಕೊಪ್ಪ ಹುಲಿ - ಸಿಂಹಧಾಮದಲ್ಲಿರುವ ಮೃಗಾಲಯ ಉನ್ನತೀಕರಣಕ್ಕೆ 5 ಕೋಟಿ ಅನುದಾನ ಮತ್ತು ರಾಮನಗರ ಜಿಲ್ಲೆಯಲ್ಲಿ ರಣಹದ್ದು ಸಂತಾನೋತ್ಪತಿ ಕೇಂದ್ರ ಸ್ಥಾಪನೆಗೆ 2 ಕೋಟಿ ಅಲ್ಲದೇ ಮಂಗಗಳ ಪುನರ್ ವಸತಿಗಾಗಿ 5 ವರ್ಷಗಳಿಗೆ ಒಟ್ಟು 6.25 ಕೋಟಿ ಮೀಸಲಲ್ಲದೇ ಪ್ರಸ್ತಕ ಸಾಲಿನಲ್ಲಿ 1.25 ಕೋಟಿ ಅನುದಾನ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ಮೊದಲ ಕಡಲಧಾಮ (ಮರೀನ್ ಇಕೋ ಪಾರ್ಕ್) ಸ್ಥಾಪನೆಗೆ 1 ಕೋಟಿ ಅನುದಾನವನ್ನು ನೀಡಲಾಗಿದೆ.