ಆಗ್ರಾ: ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಹಿ ಸುದ್ದಿಯೊಂದು ಬಂದಿದೆ.
ಭಾರತದಲ್ಲಿ ಅತಿಹೆಚ್ಚು ಪ್ರವಾಸಿಗರು ಸಂದಿಸುವ ತಾಜ್ ಮಹಲ್ನಲ್ಲಿ 3 ಗಂಟೆಗಳಿಗಿಂತ ಹೆಚ್ಚಿನ ಅವಧಿ ಕಳೆದರೆ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಹೊಸ ನಿಯಮದ ಆದೇಶ ಹೊರಡಿಸಿದೆ. ತಾಜ್ ಮಹಲ್ಗೆ ಅನಧಿಕೃತ ಪ್ರವೇಶ ನಿಯಂತ್ರಿಸುವ ಸಲುವಾಗಿ ನೂತನ ನಿಯಮ ಜಾರಿಗೆ ತಂದಿರುವುದಾಗಿ ಇಲಾಖೆ ಸ್ಪಷ್ಟಪಡಿಸಿದೆ.
ಇಲಾಖೆಯ ಮೇಲ್ವಿಚಾರಕ ಬಸಂತ್ ಕುಮಾರ್ ಮಾತನಾಡಿ, ತಾಜ್ ಮಹಲ್ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರವಾಸಿಗರು ಕಾಲ ಕಳೆಯಬಹುದಾಗಿತ್ತು. ಜೊತೆಗೆ ಅನಧಿಕೃತವಾಗಿ ಪ್ರವೇಶ ಪಡೆಯುವುದಕ್ಕೂ ಅವಕಾಶವಿತ್ತು. ಇದನ್ನು ತಡೆಯುವ ಉದ್ದೇಶದಿಂದ ನೂತನ ನಿಯಮ ಜಾರಿಗೆ ತರಲಾಗಿದೆ. ತಾಜ್ ಮಹಲ್ನಲ್ಲಿ 3 ಗಂಟೆಗಳು ಮಾತ್ರವೇ ಕಳೆಯಬಹುದು. ಇದಕ್ಕೂ ಅಧಿಕ ಸಮಯ ತೆಗೆದುಕೊಂಡರೆ ಪ್ರವಾಸಿಗರು ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಾಜ್ ಸುತ್ತಲಿನ ಪ್ರವೇಶಕ್ಕೆ ಟರ್ನ್ ಸ್ಟೈಲ್ ದ್ವಾರಗಳನ್ನು ಅಳವಡಿಸಲಾಗುವುದು. ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಇವುಗಳನ್ನು ಜೋಡಿಸಲಾಗುತ್ತಿದೆ. 7 ದ್ವಾರಗಳ ಪೈಕಿ 5 ದ್ವಾರಗಳು ಹೊರ ಹೋಗಲು ಮೀಸಲಿರಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಟೋಕನ್ಗಳನ್ನು ವಿತರಿಸಲಾಗುವುದು ಎಂದು ವಿವರಿಸಿದ್ದಾರೆ.
ಪುರಾತತ್ವ ಇಲಾಖೆಯ ಹೊಸ ನಿಯಮಕ್ಕೆ ಪ್ರವಾಸಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರವಾಸಿಗರು ವಿಮುಖರಾಗಲಿದ್ದಾರೆ. ಈ ಬಗ್ಗೆ ಇಲಾಖೆ ಇನ್ನೊಮ್ಮೆ ಯೋಚಿಸಬೇಕು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.