ಹಾಸನ(ಹೊಳೆನರಸೀಪುರ): 2024ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ. ಅದರ ಶ್ರೇಯಸ್ಸು ಶ್ರೇಯಸ್ ಪಟೇಲ್ ಅವರಿಗೆ ಸಲ್ಲುತ್ತದೆ. ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಆದರೆ ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು ಎಂದು ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸನ ಕಾಂಗ್ರೆಸ್ ಪಕ್ಷದ ಸಂಸದ ಶ್ರೇಯಸ್ ಪಟೇಲ್ ಅವರನ್ನು ಹಾಡಿಹೊಗಳಿದ್ದಾರೆ. ಇಲ್ಲಿತನಕ ಯಾವುದೇ ಕಾರ್ಯಕ್ರಮ ನಡೆಯುತ್ತೆ ಅಂದರೆ ಯಾವುದೋ ಒಂದು ಮನೆಗೆ, ಒಂದು ತೋಟದ ಮನೆಯಲ್ಲಿ ಮಾತ್ರ ಲೈಟ್ ಇರೋದು, ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನೋಡಿರಲಿಲ್ಲ. ಈಗ ಹೊಳೆನರಸೀಪುರದಲ್ಲಿ ಲೈಟ್ ಇದೆ. ಶ್ರೇಯಸ್ ಪಟೇಲ್ ಅವರು ಮತ್ತೆ ತಮ್ಮ ತಾತನ ಕಾಲಕ್ಕೆ ಮತ್ತೆ ಹೊಳೆನರಸೀಪುರವನ್ನು ಕೊಂಡ್ಯೊಯ್ದಿದ್ದಾರೆ. ಹೊಳೆನರಸೀಪುರವನ್ನು ಮಾದರಿಯನ್ನಾಗಿ ಮಾಡೋಣ ಎಂದರು.
ರಾಜಕಾರಣದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದೇನೆ. ಶ್ರೇಯಸ್ ಪಟೇಲ್ ಬೇರೆ ಪಕ್ಷದಿಂದ ಹಾಸನ ಸಂಸದರಾಗಿದ್ದಾರೆ. ಮಾನವೀಯತೆ ಅನ್ನೋದು ಬಹಳ ಮುಖ್ಯ. ಅದು ಕಳೆದು ಹೋಗಿತ್ತು. ಈಗ ವಾಪಸ್ ಬಂದಿದೆ. ಇದೇ ರೀತಿ ಮುಂದುವರಿಯಲಿ. ಭುವನೇಶ್ವರಿ ತಾಯಿಯ ರಥವವನ್ನು ಇಲ್ಲಿನ ಪ್ರಮುಖ ಬೀದಿಗಳಲ್ಲಿ ಎಳೆಯುವ ಮೂಲಕ ಹೊಳೆನರಸೀಪುರಕ್ಕೆ ಹೊಸ ಮೆರುಗು ನೀಡೋಣ. ಜೊತೆಗೆ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡೋಣ. ಎಲ್ಲಿಯತನಕ ಶ್ರೇಯಸ್ ಪಟೇಲ್ಗೆ ಹೊಳೆನರಸೀಪುರದಲ್ಲಿ ಅಧಿಕಾರ ಕೊಡುತ್ತೀರೋ ಅಲ್ಲಿವರೆಗೆ ನಾನು ಯಾವುದೇ ಪಕ್ಷದಲ್ಲಿರಲಿ, ಇದೇ ತರಹ ಪ್ರತೀ ವರ್ಷ ಬರುತ್ತೇನೆ ಎಂದು ಪ್ರೀತಂ ಗೌಡ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: 'ನನ್ನ ಮಗ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ': ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್