ತ್ರಿಶೂರ್: ರಸ್ತೆ ಬದಿ ಮಲಗಿದ್ದವರ ಮೇಲೆ ಟಿಂಬರ್ ಲಾರಿ ಹರಿದು ಕೇರಳದಲ್ಲಿ ಭಾರೀ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಜನ ಗಾಯಗೊಂಡಿದ್ದಾರೆ. ತ್ರಿಶೂರ್ ಜಿಲ್ಲೆಯ ನಾಟಿಕಾದಲ್ಲಿ ಇಂದು ನಸುಕಿನ ಜಾವ 4 ಗಂಟೆಯ ಸುಮಾರಿಗೆ ಭೀಕರ ಘಟನೆ ಸಂಭವಿಸಿತು.
ಕಳಿಯಪ್ಪನ (50), ಜೀವನ್ (4), ನಾಗಮ್ಮ (39), ಬೆಂಗಾರಿ (20) ಮತ್ತು ಒಂದೂವರೆ ವರ್ಷದ ಮಗ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.
VIDEO | Kerala: At least five people were killed and several others injured when a lorry ran over people sleeping on roadside in #Thrissur. #KeralaNews
— Press Trust of India (@PTI_News) November 26, 2024
(Full video available on PTI Videos - https://t.co/n147TvrpG7) pic.twitter.com/8XpC6qr3fd
ಮೃತರೆಲ್ಲರೂ ಅಲೆಮಾರಿ ಸಮುದಾಯದರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಇರದ ಹಿನ್ನೆಲೆಯಲ್ಲಿ ಜನರು ರಸ್ತೆ ಮೇಲೆ ಟೆಂಟ್ ಹಾಕಿ ಮಲಗಿದ್ದರು. ಲಾರಿ ಚಾಲಕ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಇದೇ ರಸ್ತೆಗೆ ನುಗ್ಗಿದ್ದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಚಾಲಕ ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದ. ಸ್ಥಳೀಯರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಣ್ಣೂರು ಮೂಲದ ಲಾರಿ ಚಾಲಕ ಜೋಶ್ (54) ಮತ್ತು ಕ್ಲೀನರ್ ಅಲೆಕ್ಸ್ (33) ಎಂಬಿಬ್ಬರನ್ನು ಬಂಧಿಸಲಾಗಿದೆ. ಘಟನೆ ನಡೆದ ವೇಳೆ ಚಾಲನೆ ಮಾಡುತ್ತಿದ್ದ ಅಲೆಕ್ಸ್ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಜೊತೆಗೆ, ಈತನಲ್ಲಿ ಚಾಲನಾ ಪರವಾನಗಿಯೂ ಇಲ್ಲದಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
"ಟಿಂಬರ್ ಲಾರಿ ಕಣ್ಣೂರಿನಿಂದ ಆಗಮಿಸುತ್ತಿತ್ತು. ಲಾರಿಯಲ್ಲಿದ್ದ ಇಬ್ಬರೂ ಪಾನಮತ್ತರಾಗಿದ್ದರು. ಭಾರತೀಯ ನ್ಯಾಯಸಂಹಿತೆ ಅಡಿಯಲ್ಲಿ ಜಾಮೀನುರಹಿತ ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ" ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತ್ರಿಶೂರ್ ನಗರ ಪೊಲೀಸ್ ಆಯುಕ್ತ ಆರ್.ಇಳಂಗೋ ತಿಳಿಸಿದರು.
ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, "ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ನಿಗಾ ವಹಿಸಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ಮುಗಿಸಿ, ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುತ್ತೇವೆ. ಜೊತೆಗೆ, ಪ್ರಕರಣದ ವಿವರವಾದ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ" ಎಂದರು.
"ಘಟನೆ ದುರದೃಷ್ಟಕರ" ಎಂದು ಪ್ರತಿಕ್ರಿಯೆ ನೀಡಿರುವ ಕೇರಳ ಕಂದಾಯ ಸಚಿವ ಕೆ.ರಾಜನ್, "ಪ್ರಾಥಮಿಕ ತನಿಖೆಯಲ್ಲಿ ಚಾಲಕ ಮತ್ತು ಕ್ಲೀನರ್ ತಪ್ಪು ಎದ್ದು ಕಾಣುತ್ತಿದೆ. ರಸ್ತೆ ಬದಿ ಮಲಗಿದ್ದ ಜನರ ಕುರಿತು ಕೂಡ ಪರಿಶೀಲಿಸುತ್ತಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ: ರಾಗಿ ಬೇರ್ಪಡಿಸುವ ಯಂತ್ರ ಪಲ್ಟಿ, ಇಬ್ಬರು ಕಾರ್ಮಿಕರು ಸಾವು