ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 119 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೊಯ್ದಿನ್ ಶಬ್ಬಿರ್(38), ಆಂಧ್ರಪ್ರದೇಶ ರಾಜ್ಯದ ವಿಜಯವಾಡ ಜಿಲ್ಲೆಯ ಮಹೇಶ್ ದ್ವಾರಿಕಾನಾಥ ಪಾಂಡೆ(30), ಕೇರಳ ರಾಜ್ಯದ ಅಲುಯಾ ಜಿಲ್ಲೆಯ ಅಜಯ್ ಕೃಷ್ಣ(33) ಮತ್ತು ಹರಿಯಾಣ ರಾಜ್ಯದ ಜಿಂದ್ ಜಿಲ್ಲೆಯ ಜೀವನ್ ಸಿಂಗ್(35) ಬಂಧಿತರು.
ಈ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿ, "ಆರೋಪಿಗಳು ಆಂಧ್ರಪ್ರದೇಶ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಕಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 119 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
"ಫೆ.17 ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶ ರಾಜ್ಯದಿಂದ ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಕಾರಿನಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಎರಡು ವಾಹನಗಳನ್ನು ಗುರುತಿಸಿ, ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಲಾಗಿದೆ " ಎಂದು ಹೇಳಿದರು.
"ಆರೋಪಿಗಳು ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ಹಾಗೂ ಈ ವಾಹನಗಳಲ್ಲಿ ಸಾಗಿಸುತ್ತಿದ್ದ ರೂ. 35 ಲಕ್ಷ ಮೌಲ್ಯದ ನ 119 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 5 ಮೊಬೈಲ್ ಫೋನ್ಗಳು, ಮೀನು ಸಾಗಾಟಕ್ಕೆ ಉಪಯೋಗಿಸುವ ಮೀನಿನ ಕ್ರೆಟ್ ಹಾಗೂ ಇತರ ಸ್ವತ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಆಂಧ್ರಪ್ರದೇಶದಿಂದ ಬೆಂಗಳೂರು - ಮಂಗಳೂರು ಮೂಲಕ ಕೇರಳ ರಾಜ್ಯದ ಕಾಸರಗೋಡಿಗೆ ಗೂಡ್ಸ್ ಟೆಂಪೋ ಹಾಗೂ ಕಾರಿನಲ್ಲಿ ಸಾಗಿಸುತ್ತಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ 51 ಲಕ್ಷ ರೂ. ಆಗಬಹುದು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ" ಎಂದು ಮಾಹಿತಿ ನೀಡಿದರು.
"ಆರೋಪಿಗಳ ಪೈಕಿ ಮೊಯಿದ್ದೀನ್ ಶಬ್ಬಿರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು, ಮಂಜೇಶ್ವರ, ಕುಂಬ್ಳೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ದನಗಳ್ಳತನ, ಹಲ್ಲೆ, ಕೊಲೆ ಹೀಗೆ ಒಟ್ಟು 12 ಪ್ರಕರಣ ದಾಖಲಾಗಿರುತ್ತವೆ. ಅಲ್ಲದೇ ಆಂಧ್ರಪ್ರದೇಶದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿರುತ್ತದೆ. ಈತನನ್ನು 2023 ನೇ ಇಸವಿಯಲ್ಲಿ ಸಿಸಿಬಿ ಪೊಲೀಸರ ತಂಡ ಬಂಧಿಸಿ 23.250 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಈತ ಸುಮಾರು ಒಂದೂವರೆ ವರ್ಷ ಜೈಲ್ ನಲ್ಲಿದ್ದು, ಸುಮಾರು 6 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಪುನಃ ಅದೇ ಗಾಂಜಾ ಸಾಗಾಟ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ ಎಂದು" ಹೇಳಿದರು.
"ಇನ್ನೋರ್ವ ಆರೋಪಿ ಮಹೇಶ್ ದ್ವಾರಿಕಾನಾಥ ಪಾಂಡೆ ವಿರುದ್ಧ ಆಂಧ್ರಪ್ರದೇಶದ ರಾಜಮಂಡ್ರಿ ಎಂಬಲ್ಲಿ 2 ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತವೆ. ಅಜಯ್ ಕೃಷ್ಣನ್ ಎಂಬಾತನ ವಿರುದ್ಧ ಅಲಪ್ಪುಳಂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ, ಗಾಂಜಾ ಮಾರಾಟ, ಹಾಗೂ ನಕಲಿ ಚಿನ್ನವನ್ನು ಬ್ಯಾಂಕ್ ನಲ್ಲಿ ಅಡವಿರಿಸಿ ವಂಚನೆ ಮಾಡಿರುವು ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ" ಎಂದರು.
"ಆರೋಪಿ ಜೀವನ್ ಸಿಂಗ್ ಎಂಬಾತನ ವಿರುದ್ಧ ಆಂಧ್ರಪ್ರದೇಶದ ಮೊತುಕುಡಮ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣವೊಂದು ದಾಖಲಾಗಿರುತ್ತದೆ. ಆರೋಪಿಗಳು ಕರ್ನಾಟಕ, ಕೇರಳ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಆಂಧ್ರಪ್ರದೇಶದಿಂದ ಗಾಂಜಾವನ್ನು ಖರೀದಿಸಿಕೊಂಡು ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಈ ಬೃಹತ್ ಗಾಂಜಾ ಮಾರಾಟ, ಸಾಗಣೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ?" ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ - ಪೌಷ್ಟಿಕ ಆಹಾರ ಪದಾರ್ಥ ಅಕ್ರಮ ಸಂಗ್ರಹ ಆರೋಪ: ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನರ ಬಂಧನ
ಇದನ್ನೂ ಓದಿ: ವಿಜಯಪುರ: 10 ಕಂಟ್ರಿ ಪಿಸ್ತೂಲ್, 24 ಸಜೀವ ಗುಂಡುಗಳು ವಶಕ್ಕೆ, 10 ಮಂದಿ ಸೆರೆ