ತೆಲಂಗಾಣ : ಸಹಾಯದ ನಿರೀಕ್ಷೆಯೊಂದಿಗೆ ನಟ ಸೋನು ಸೂದ್ರನ್ನು ಭೇಟಿಯಾಗಲು ಯುವಕನೋರ್ವ ತೆಲಂಗಾಣದಿಂದ ಮುಂಬೈಗೆ ಕಾಲ್ನಡಿಗೆಯ ಮೂಲಕ ತೆರಳಿದ್ದಾನೆ.
ವೆಂಕಟೇಶ್ ಹರಿಜನ್ ಎಂಬಾತ ಸೋನು ಸೂದ್ ಭೇಟಿಗೆ ತೆರಳಿದ ಯುವಕ. ಸಾಲದ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಹಣಕಾಸು ಕಂಪನಿಯೊಂದು ವಶಪಡಿಸಿಕೊಂಡ ತನ್ನ ತಂದೆಯ ರಿಕ್ಷಾವನ್ನು ಮರಳಿ ಪಡೆಯಲು ಸೋನು ಸಹಾಯ ಮಾಡುತ್ತಾರೆ ಎಂಬ ಭರವಸೆಯೊಂದಿಗೆ ಯುವಕ ಮುಂಬೈಗೆ ಕಾಲ್ನಡಿಗೆ ಮೂಲಕ ತೆರಳಿದ್ದಾನೆ.
ವೆಂಕಟೇಶ್ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ದೋರ್ನಾಲ್ಪಲ್ಲಿಯವನು. ಈತ ಜೂನ್ 1ರಿಂದ ಕಾಲ್ನಡಿಗೆ ಪ್ರಾರಂಭಿಸಿದ್ದು, ಎಂಟು ದಿನಗಳಲ್ಲಿ 400 ಕಿ.ಮೀ ಸಾಗಿದ್ದಾನೆ. ಜಿಲ್ಲೆಯಿಂದ ಪ್ರಯಾಣ ಆರಂಭಿಸಿದ ಈತ ಮಂಗಳವಾರ ಸೋಲಾಪುರ ತಲುಪಿದ್ದಾನೆ. ದಿನಕ್ಕೆ 14 ಕಿ.ಮೀವರೆಗೆ ಸಾಗಿ ರಾತ್ರಿ ವೇಳೆ ಧರ್ಮಶಾಲಾ ಅಥವಾ ದೇವಾಲಯದಲ್ಲಿ ವಿಶ್ರಾಂತಿ ಪಡೆಯುತ್ತಾನಂತೆ.
ಸೋನು ಸೂದ್ ಸದ್ಯ ವೆಂಕಟೇಶನಿಗೆ ಭರವಸೆಯ ಕಿರಣವಾಗಿದ್ದಾರೆ. ಯುವಕನ ತಂದೆ ಆಟೋಡ್ರೈವರ್. ಆದರೆ, ಅದರ ಸಾಲದ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಹಣಕಾಸು ಕಂಪನಿ ತಮ್ಮ ರಿಕ್ಷಾವನ್ನು ವಶಪಡಿಸಿಕೊಂಡಿದೆ. ಅದರ ನಂತರ ಕುಟುಂಬ ನಿರ್ವಹಣೆಗೆ ಕಷ್ಟವಾಗಿದೆ ಎಂದು ಹೇಳಿದ್ದಾನೆ.