ಸೌತಮ್ಟನ್: ವಿಶ್ವಕಪ್ನಲ್ಲಿ ಇಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಸೆಣಸಲಿದೆ. ಕಳೆದ 2 ಪಂದ್ಯಗಳ ಸೋಲಿನಿಂದ ಕಂಗೆಟ್ಟಿರುವ ಆಫ್ರಿಕಾ, ಭಾರತದ ವಿರುದ್ಧ ಗೆಲುವು ಸಾಧಿಸಿ ಗೆಲುವಿನ ಹಾದಿಗೆ ಮರಳುವ ಆಲೋಚನೆಯಲ್ಲಿದ್ದರೆ, ಭಾರತ ಗೆಲುವಿನ ಮೂಲಕ ವಿಶ್ವಕಪ್ ಅಭಿಯಾನ ಶುರು ಮಾಡುವ ತವಕದಲ್ಲಿದೆ.
12 ವಿಶ್ವಕಪ್ಗಳಲ್ಲೂ ಪಾಲ್ಗೊಂಡಿರುವ ಭಾರತ ತಂಡ ಒಟ್ಟು 4 ಬಾರಿ ದಕ್ಷಿಣ ಆಫ್ರಿಕಾ ತಂಡದೊಡನೆ ಕಾದಾಡಿದೆ. ಇದರಲ್ಲಿ ಭಾರತ 3 ರಲ್ಲಿ ಸೋಲನುಭವಿಸಿದೆ. 2015 ರ ವಿಶ್ವಕಪ್ನಲ್ಲಿ ಮಾತ್ರ ಭಾರತ 130 ರನ್ಗಳ ಅಂತರದಿಂದ ಜಯ ಸಾಧಿಸಿದೆ. ಎರಡು ತಂಡಗಳ ಮುಖಾಮುಖಿಯ ಸಂಪೂರ್ಣ ವಿವಿರ ಇಲ್ಲಿದೆ.
1992 ಮಾರ್ಚ್ 15
1992 ರಲ್ಲಿ ಆಸ್ಟೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯದಲ್ಲಿ ಕೇವಲ 30 ಓವರ್ಗಳ ಆಟ ನಡೆದಿತ್ತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತ್ತು. ನಾಯಕ ಮೊಹಮ್ಮದ್ ಅಜರುದ್ದೀನ್ 79 ಹಾಗೂ ಕಪಿಲ್ದೇವ್ 42 ರನ್ ಗಳಿಸಿದ್ದರು.
181 ರನ್ಗಳ ಟಾರ್ಗೆಟ್ ಬೆನ್ನತ್ತಿದ ದ.ಆಫ್ರಿಕಾ ತಂಡ 29.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
1999 ಮೇ 25
ಇಂಗ್ಲೆಂಡ್ನ ಬ್ರಿಂಗ್ಟನ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಗಂಗೂಲಿ(97),ದ್ರಾವಿಡ್(54) ರ ಅರ್ಧಶತಕದ ನೆರವಿನಿಂದ 253 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಆಫ್ರಿಕನ್ ಪಡೆ 47.2 ಓವರ್ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತ್ತು. ಜಾಕ್ ಕಾಲೀಸ್ 96 ರನ್ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
2011 ಮಾರ್ಚ್ 12
ನಾಗ್ಪುರದಲ್ಲಿ ನಡೆದಿದ್ದ ಈ ಪಂದ್ಯದಲ್ಲೂ ಭಾರತ ತಂಡವೇ ಮೊದಲು ಬ್ಯಾಟಿಂಗ್ ನಡೆಸಿತ್ತು.ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (111) ಶತಕ ಹಾಗೂ ಸೆಹ್ವಾಗ್(73), ಗಂಭೀರ್(69)ರ ಅರ್ಧಶತಕದ ನೆರವಿನಿಂದ 296 ರನ್ ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ದ.ಆಫ್ರಿಕಾದ ಆಮ್ಲ(61),ಜಾಕ್ ಕಾಲೀಸ್(69),ಎಬಿ ಡಿ(52)ರ ಅರ್ಧಶತಕಗಳ ನೆರವಿನಿಂದ 49.4 ಓವರ್ಗಳಲ್ಲಿ ಜಯ ಸಾಧಿಸಿತ್ತು.
2015 ಫೆಬ್ರವರಿ 22
ಮೆಲ್ಬರ್ನ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತಂಡವೇ ಮೊದಲು ಬ್ಯಾಟಿಂಗ್ ನಡೆಸಿದ್ದು, ಧವನ್ (137) ಶತಕ ಹಾಗೂ ರಹಾನೆ (79) ಅರ್ಧಶತಕದ ನೆರವಿನಿಂದ ಮೊದಲ ಬಾರಿಗೆ 307 ರನ್ ಗಳಿಸಿತ್ತು.
308 ರನ್ಗಳನ್ನು ಬೆನ್ನತ್ತಿದ ದ.ಆಫ್ರಿಕಾ ತಂಡ 40.2 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಗುವ ಮೂಲಕ 130 ರನ್ಗಳ ಹೀನಾಯ ಸೋಲು ಕಂಡಿತ್ತು. ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಜಯ ಸಾಧಿಸಿತ್ತು. ಪ್ಲೆಸಿಸ್ 55 ರನ್ಗಳಿಸಿದ್ದು ಬಿಟ್ಟರೆ ಈ ಪಂದ್ಯದಲ್ಲಿ ಬೇರೆ ಆಟಗಾರರು ಭಾರತ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾಗದೆ ವಿಕೆಟ್ ಒಪ್ಪಿಸಿದ್ದರು.
ವಿಶ್ವಕಪ್ನ 4 ಪಂದ್ಯಗಳಲ್ಲೂ ಭಾರತವೇ ಮೊದಲು ಬ್ಯಾಟಿಂಗ್ ನಡೆಸಿದ್ದು, ವಿಶೇಷವಾಗಿದ್ದು, ಮೊದಲ ಮೂರು ಪಂದ್ಯಗಳಲ್ಲಿ ದಕ್ಷಿಣ ಅಫ್ರಿಕಾ ತಂಡ ಗೆಲುವು ಸಾಧಿಸಿದೆ. ಆದರೆ ಕಳೆದ ಬಾರಿ ಮಾತ್ರ ಭಾರತ ತಂಡ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಿ ಏಕಪಕ್ಷೀಯ ಗೆಲುವು ದಾಖಲಿಸಿತ್ತು. ವಿಶ್ವಕಪ್ನಲ್ಲಿ ದಾಖಲೆಯಲ್ಲಿ ಆಫ್ರಿಕಾ ಮುನ್ನಡೆ ಸಾಧಿಸಿದ್ದರೆ, ಕಳೆದ 5 ಐಸಿಸಿ ಆಯೋಜಿಸಿರುವ ಟೂರ್ನಿಯಲ್ಲಿ ಭಾರತ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿದೆ.