ಹೈದರಾಬಾದ್: ಜಂಟಲ್ಮನ್ಸ್ ಗೇಮ್ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ನ ಮಹತ್ತರ ಟೂರ್ನಿ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರ ಜೊತೆಯಲ್ಲೇ ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರವೂ ಭರ್ಜರಿಯಾಗಿಯೇ ನಡೆಯುತ್ತಿದೆ.
ಈ ಬಾರಿ ವಿಶ್ವಕಪ್ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಆಯೋಜನೆಯಾಗಿದ್ದು ವೇಗಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾರುಪತ್ಯ ಮೆರೆಯುವ ಸಾಧ್ಯತೆ ನಿಚ್ಚಳವಾಗಿದೆ. ಮೇ.30ರಿಂದ ಆರಂಭವಾಗುವ ವಿಶ್ವಕಪ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಪ್ರಮುಖ ವೇಗಿಗಳ ಮೇಲೊಂದು ಒಳನೋಟ ಇಲ್ಲಿದೆ.
ಜಸ್ಪ್ರೀತ್ ಬೂಮ್ರಾ: ಭಾರತ
2019ರ ವಿಶ್ವಕಪ್ ಟೀಮ್ ಇಂಡಿಯಾದ ವೇಗದ ಬಲ ಎಂದೇ ಬಿಂಬಿತವಾಗಿರುವ ಬೂಮ್ರಾ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿಯೇ ಇದೆ.
2016ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಬೂಮ್ರಾ, ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದ ವೇಗದ ಬೌಲಿಂಗ್ ಶಕ್ತಿಯಾಗಿದ್ದಾರೆ. ಈ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಗೆಲುವಿನಲ್ಲಿ ಬೂಮ್ರಾ ಪಾತ್ರ ಬಹಳ ದೊಡ್ಡದಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಬೂಮ್ರಾ ಪ್ರದರ್ಶನ ಮುಂಬೈ ತಂಡಕ್ಕೆ ಮತ್ತೊಂದು ಕಪ್ ಗೆಲ್ಲಲು ಸಹಾಯಕವಾಗಿತ್ತು.
ಯಾರ್ಕರ್, ಡೆತ್ ಓವರ್ ಬೌಲಿಂಗ್ ಹಾಗೂ ಸ್ವಿಂಗ್ ಬೌಲಿಂಗ್ ಬೂಮ್ರಾ ಅಸ್ತ್ರವಾಗಿದೆ. ಐಪಿಎಲ್ ಪ್ರದರ್ಶನ, ವಿಶ್ವಕಪ್ನಲ್ಲಿ ಬೂಮ್ರಾ ಪಾಲಿಗೆ ಸಹಾಯಕ್ಕೆ ಬರಲಿದೆ.
ಶಾಹಿನ್ ಅಫ್ರಿದಿ: ಪಾಕಿಸ್ತಾನ
ವಾಸಿಂ ಅಕ್ರಂ, ವಕಾರ್ ಯೂನಿಸ್ ಹಾಗೂ ಶೋಯಬ್ ಅಖ್ತರ್ಗಳಂತ ದಿಗ್ಗಜ ಬೌಲರ್ಗಳಿದ್ದ ಪಾಕ್ ತಂಡದಲ್ಲಿ ಶಾಹಿನ್ ಅಫ್ರಿದಿ ಎನ್ನುವ ಯುವ ಬೌಲರ್ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.
ಕಳೆದ ವರ್ಷ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಶಾಹಿನ್ ಅಫ್ರಿದಿ 10 ಏಕದಿನ ಪಂದ್ಯದಲ್ಲಿ 19 ವಿಕೆಟ್ ಕಿತ್ತಿದ್ದಾರೆ. 38 ರನ್ನಿಗೆ 4 ವಿಕೆಟ್ ಉತ್ತಮ ಸಾಧನೆಯಾಗಿದೆ.
ಓಶಾನೆ ಥೋಮಸ್: ವೆಸ್ಟ್ ಇಂಡೀಸ್
ಹೊಡಿಬಡಿ ಆಟಗಾರರ ದಂಡೇ ಇರುವ ವಿಂಡೀಸ್ ತಂಡದಲ್ಲಿ ಓಶಾನೆ ಥೋಮಸ್ ಎನ್ನುವ ದೈತ್ಯ ಬೌಲರ್ ಈ ಬಾರಿಯ ವಿಶ್ವಕಪ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
22 ವರ್ಷದ ಥೋಮಸ್ 150ಕಿ.ಮೀ ವೇಗದಲ್ಲಿ ಚೆಂಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿಶೇಷವೆಂದರೆ ಓಶಾನೆ ಥೋಮಸ್ ಭಾರತದ ವಿರುದ್ಧವೇ ಏಕದಿನ ಹಾಗೂ ಟಿ20ಗೆ ಪದಾರ್ಪಣೆಗೈದಿದ್ದರು.
ಸ್ವಿಂಗ್ ಯಾರ್ಕರ್ ಅನ್ನು ಅಸ್ತ್ರವಾಗಿಸಿಕೊಂಡಿರುವ ಥೋಮಸ್ ಕೆರಬಿಯನ್ ಪ್ರೀಮಿಯರ್ ಲೀಗ್ನಲ್ಲಿ ದಾಂಡಿಗರಿಗೆ ದುಸ್ವಪ್ನವಾಗಿ ಕಾಡಿದ್ದರು.
ಕಗಿಸೋ ರಬಾಡ: ದಕ್ಷಿಣ ಆಫ್ರಿಕಾ
2015ರಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ನೀಡಿದ್ದ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದು ಗಮನ ಸೆಳೆದಿದ್ದರು. ಆರಂಭದ ಪಂದ್ಯದಲ್ಲೇ 16 ರನ್ ನೀಡಿ 6 ವಿಕೆಟ್ ಕಿತ್ತು ಸಾಮರ್ಥ್ಯ ತೋರ್ಪಡಿಸಿದ್ದರು.
ಈ ಬಾರಿಯ ಐಪಿಎಲ್ನಲ್ಲಿ 12 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದರು. ಈ ಆವೃತ್ತಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಯಾದಿಯಲ್ಲಿ ರಬಾಡ ದ್ವಿತೀಯ ಸ್ಥಾನದಲ್ಲಿದ್ದಾರೆ.
ಡೆತ್ ಓವರ್, ಮಧ್ಯಮ ಕ್ರಮಾಂಕ ಹಾಗೂ ಉತ್ತಮ ಜೊತೆಯಾಟವನ್ನು ಮುರಿಯುವಲ್ಲಿ ರಬಾಡ ನಿಸ್ಸೀಮ. ಹೀಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ರಬಾಡ ಮಿಂಚು ಹರಿಸೋದು ಗ್ಯಾರಂಟಿ.
ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾ
ಕಳೆದೊಂದು ವರ್ಷದಿಂದ ಆಗಾಗ್ಗೆ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ವಿಶ್ವಕಪ್ನಲ್ಲಿ ಬ್ಯಾಟ್ಸ್ಮನ್ಗಳನ್ನು ಕಾಡುವುದು ಪಕ್ಕಾ.
ವೇಗದ ಎಸೆತ, ಬೌನ್ಸರ್ಗಳೇ ಸ್ಟಾರ್ಕ್ ಅಸ್ತ್ರವಾಗಿದ್ದು ಕಳೆದ ಬಾರಿಯ ವಿಶ್ವಕಪ್ನಲ್ಲಿ 22 ವಿಕೆಟ್ ಪಡೆದಿದ್ದರು. ಕಳೆದ 15 ತಿಂಗಳಲ್ಲಿ ಕೇವಲ ಮೂರು ಏಕದಿನ ಪಂದ್ಯವನ್ನಾಡಿದ್ದಾರೆ.