ಮುಂಬೈ: ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ನಾಳೆ ಟೀಂ ಇಂಡಿಯಾ ಇಂಗ್ಲೆಂಡ್ ವಿಮಾನವೇರಲಿದೆ. ಜೂನ್ 5ರಂದು ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಅದಕ್ಕೂ ಮುನ್ನಾ ದಿನವಾದ ಇಂದು ಮುಂಬೈನಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿರುವ ಕೊಹ್ಲಿ, ಈ ಸಲದ ವಿಶ್ವಕಪ್ ಗೆದ್ದು ಭಾರತೀಯ ಯೋಧರಿಗೆ ಅರ್ಪಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಕ್ರಿಕೆಟ್ ಸೇನೆ ರೆಡಿ.. ಈ ಸಾರಿ ವಿಶ್ವಕಪ್ ಗೆದ್ದು ತರುತ್ತೇವೆ - ಕ್ಯಾಪ್ಟನ್ ಕೊಹ್ಲಿ ಕಾನ್ಫಿಡೆಂಟ್
ಭಾರತೀಯ ಯೋಧರಿಗಿಂತಲೂ ಹೆಚ್ಚಿನ ಸ್ಫೂರ್ತಿ ಪಡೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅವರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು ಕೂಡಾ ಅಸಾಧ್ಯ. ಅಂತಹ ಯೋಧರಿಂದ ಸ್ಫೂರ್ತಿ ಪಡೆದುಕೊಂಡಾಗ ಮಾತ್ರ ಏನಾದ್ರೂ ಸಾಧನೆ ಮಾಡಲು ಆಗುತ್ತದೆ ಎಂದಿರುವ ಕೊಹ್ಲಿ, ವಿಶ್ವಕಪ್ನಲ್ಲಿ ಒತ್ತಡ ನಿಭಾಯಿಸುವುದೇ ಅತೀ ದೊಡ್ಡ ಕೆಲಸವಾಗುತ್ತದೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ನಲ್ಲಿ ಆದಷ್ಟು ಬೇಗನೇ ಹೊಂದಿಕೊಂಡು ಆಟದ ಬಗ್ಗೆ ಹೆಚ್ಚು ಗಮನ ಹರಿಸುವುದು ಅತೀ ಮುಖ್ಯ. ಸಾಮರ್ಥ್ಯಕ್ಕೆ ತಕ್ಕ ಕ್ರಿಕೆಟ್ ಆಡಿದ್ದಲ್ಲಿ ಖಂಡಿತವಾಗಿ ವಿಶ್ವಕಪ್ ನಮ್ಮದಾಗಲಿದೆ. ಹೈಸ್ಕೋರಿಂಗ್ ಪಂದ್ಯ ನಿರೀಕ್ಷೆ ಮಾಡಲಾಗುತ್ತಿದ್ದು, ಯಾವುದೇ ಎದುರಾಳಿಗಳ ಬಗ್ಗೆ ಚಿಂತೆಯಿಲ್ಲ ಎಂದಿದ್ದಾರೆ ವಿರಾಟ್ ಕೊಹ್ಲಿ.