ಮಂಡ್ಯ : ಪ್ರಧಾನಿ ಅವರು ಹಲವು ಉತ್ತಮ ಸೂಚನೆ ನೀಡಿದ್ದಾರೆ. ಅವರ ಸೂಚನೆ ಪಾಲಿಸಿದ್ರೆ ಸಂಪೂರ್ಣ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.
ಪ್ರಧಾನಿ ಮೋದಿ ವಿಡಿಯೋ ಸಂವಾದದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಮಿಟಿ ರಚಿಸಲು ಸಲಹೆ ನೀಡಿದ್ದಾರೆ. ಸದ್ಯ ಈಗಾಗಲೇ ಕಮಿಟಿ ಮಾಡಿದ್ದು, ಮತ್ತಷ್ಟು ಜವಾಬ್ದಾರಿ ನೀಡಲಾಗುವುದು ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಲು ತಿಳಿಸಿದ್ದಾರೆ. ಹೀಗಾಗಿ, ಶಾಸಕರೊಂದಿಗೆ ಸೋತ ಜನಪ್ರತಿನಿಧಿಗಳನ್ನು ಬಳಸಿಕೊಂಡು ಕೊರೊನಾ ನಿಯಂತ್ರಣ ಮಾಡೋದಕ್ಕೂ ಸಲಹೆ ನೀಡಿದ್ದಾರೆ.
ಶಿಕ್ಷಕರನ್ನು ಸಹ ಬಳಸಿಕೊಂಡು ಕೊರೊನಾ ಕಡಿವಾಣಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದ್ದು, ಪ್ರಧಾನಿ ಸಲಹೆಯನ್ನ ಪಾಲನೆ ಮಾಡಿದ್ರೇ ಶೀಘ್ರವಾಗಿ ಕೊರೊನಾ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.
ಸಂಪೂರ್ಣ ಲಾಕ್ ಡೌನ್ ತೀರ್ಮಾನ : ಕೊರೊನಾ ಸೋಂಕು ದಿನೇದಿನೆ ಏರಿಕೆಯಾಗುತ್ತಿದೆ. ನಿಯಂತ್ರಣ ಮಾಡೋದಕ್ಕೆ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ ಎಂದ ಅವರು, ಇಂದು ಚರ್ಚೆ ನಡೆಸಿ ಲಾಕ್‌ಡೌನ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರಲ್ಲದೇ, ಇದರ ಜೊತೆಗೆ ಎಲ್ಲಾ ಶಾಸಕರಿಗೂ ಫೋನ್ ಮಾಡಿ ಸಲಹೆ ಕೇಳಿ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.