ಹಾಸನ: ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸರ್ಕಾರ ನಿಶಕ್ತವಾಗಿದೆ. ನಾನೇನಾದ್ರು ಮುಖ್ಯಮಂತ್ರಿಯಾಗಿದ್ದರೇ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುತ್ತಿದ್ದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ದೇಶದಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿಯೇ ಮಕ್ಕಳ ಪೋಷಕರ ಮೊಬೈಲ್ಗೆ ಮೆಸೇಜ್ ಕಳುಹಿಸಿ ಲಕ್ಷ ಲಕ್ಷ ಕಟ್ಟಿ ದಾಖಲಾತಿ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಹಿಡಿತದಲ್ಲಿರದೇ ಸರ್ಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತದಲ್ಲಿದೆ. ಇದು ನಮ್ಮ ರಾಜ್ಯದ ಪರಿಸ್ಥಿತಿ. ಅಲ್ಲದೇ, ಸ್ಥಳೀಯ ಶಾಸಕರ, ಎಂಪಿಗಳ, ಸಚಿವರ, ಹಾಗೂ ಇನ್ನಿತರ ಎಲ್ಲಾ ರಾಜಕೀಯ ಪಕ್ಷಗಳ ರಾಜಕಾರಣಿಗಳ ಪಾಳೆಗಾರಿಕೆಯ ಕೈಯಲ್ಲಿ ಶಿಕ್ಷಣ ಇಲಾಖೆ ಸಿಲುಕಿ ನಲುಗುತ್ತಿದೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ರೆ, ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡವರಿಗೆ, ಕೂಲಿ ಕಾರ್ಮಿಕರಿಗೆ ಸಮರ್ಪಕ ಶಿಕ್ಷಣ ನೀಡುವಂತೆ ಮಾಡುತ್ತಿದ್ದೆ. ಆದ್ರೆ ಇವತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆ ನಡೆಸುತ್ತಿದ್ದು, ಇದನ್ನು ಸರ್ಕಾರ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೇ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ವಾಟಾಳ್ ಗುಡುಗಿದರು.
ಪ್ರಥಮ ಪಿಯುಸಿ ಮತ್ತು 9ನೇ ತರಗತಿಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗ್ರಹಿಸಿ, ಜೂ.1 ರಂದು ಮಧ್ಯಾಹ್ನ 12 ಗಂಟೆಯಿಂದ 2.30ರ ತನಕ ವಿದ್ಯಾರ್ಥಿಗಳು ಮನೆ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕೆಂದು ಕರೆ ನೀಡಿದರು.