ಹುಬ್ಬಳ್ಳಿ: ಕಿಮ್ಸ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತುರ್ತು ಚಿಕಿತ್ಸಾ ವಿಭಾಗದ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಿಮ್ಸ್ ಆವರಣದಲ್ಲಿ ತುರ್ತು ಚಿಕಿತ್ಸಾ ವಿಭಾಗ ತೆರೆಯುತ್ತಿದ್ದೇವೆ. 66 ಬೆಡ್ ಸಾಮರ್ಥ್ಯದ ತುರ್ತು ಚಿಕಿತ್ಸಾ ವಿಭಾಗ 10 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಾಮಗಾರಿ ಶುರುವಾಗಿದೆ ಎಂದು ತಿಳಿಸಿದರು.
ಬಳಿಕ ಬೆಡ್ ವಿಸ್ತರಣೆ ಹಾಗೂ ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆ ಹೆಚ್ಚಿಸುವ ಕುರಿತು ಮಾತನಾಡಿದ ಕೇಂದ್ರ ಸಚಿವರು, ರಾಜ್ಯದಲ್ಲಿರುವ ಮಿಲಿಟರಿ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲು ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಜೊತೆ ಚರ್ಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಡಿ.ಆರ್.ಡಿ.ಒ ಸಹಕಾರ ಕೇಳಿದ್ದೇವೆ. ಎಲ್ಲಾ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಮಾಡುತ್ತಿದ್ದೇವೆ. ಧಾರವಾಡದಲ್ಲಿ 24 ಗಂಟೆಯೊಳಗೆ ಟೆಸ್ಟಿಂಗ್ ರಿಸಲ್ಟ್ ಒದಗಿಸಲು ತಕ್ಷಣ ಗಮನ ಹರಿಸುತ್ತೇವೆ. ನೆಗೆಟಿವ್ ರಿಸಲ್ಟ್ ಸ್ವಲ್ಪ ತಡವಾದರೂ ನಡೆಯುತ್ತದೆ. ಆದರೆ ಪಾಸಿಟಿವ್ ರಿಪೋರ್ಟ್ ತಕ್ಷಣ ನೀಡಬೇಕು. ಟೆಸ್ಟಿಂಗ್ ಕೇಂದ್ರ ಹೆಚ್ಚಿಸಲು ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಜೋಶಿ ಹೇಳಿದರು.
ಹೊರ ಜಿಲ್ಲೆಗಳಿಂದ ಬರುವ ಜನರಿಂದ ಸೋಂಕು ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹೊರ ಜಿಲ್ಲೆಗಳಿಂದ ಬಂದಿರುವ ಜನರ ಬಗ್ಗೆ ಮಾಹಿತಿ ನೀಡಲು ಡಂಗುರ ಸಾರಲು ಗ್ರಾಮ ಪಂಚಾಯತ್ಗಳಿಗೆ ಸೂಚಿಸಿದ್ದೇವೆ. ಅಲ್ಲದೇ ಈ ಬಗ್ಗೆ ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.