ನವದೆಹಲಿ: ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಬೇಕು ಎಂಬ ಆಸೆ ಕಂಡಿದ್ದ ಅವಳಿ ಸಹೋದರರಿಬ್ಬರು ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡಿದ್ದು, ಇದೀಗ ಒಂದೇ ಬಾರಿಗೆ ಸೇನೆಗೆ ಸೇರ್ಪಡೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಅವಳಿ ಸಹೋದರರಾದ ಅಭಿನವ್ ಪಾಠಕ್ ಹಾಗೂ ಪರಿಣವ್ ಪಾಠಕ್, 1996ರ ಆಗಸ್ಟ್ 10ರಂದು ಜನ್ಮ ತಾಳಿದ್ದು, ಪಂಜಾಬ್ನ ಲುಧಿಯಾನದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಇದಾದ ಬಳಿಕ ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ(IMA)ಯಲ್ಲಿ ತರಬೇತಿ ಪಡೆದು ಇದೀಗ ಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಇಬ್ಬರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿರುವ ವಿಷಯವನ್ನು ಇದೀಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಐಎಂಎ ಈ ವಿಷಯವನ್ನು ಟ್ವೀಟ್ ಮಾಡಿದೆ. ಮಿಲಿಟರಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅವಳಿ ಸಹೋದರರು ಅಕಾಡೆಮಿ ಮೂಲಕ ಭಾರತೀಯ ಸೇನೆ ಸೇರಿರುವುದಾಗಿ ತಿಳಿಸಿದೆ. ವಿಶೇಷವೆಂದರೆ ಇವರ ಕುಟುಂಬಸ್ಥರು ಯಾರೂ ಭಾರತೀಯ ಸೇನೆಯಲ್ಲಿಲ್ಲ. ಆದರೂ ತಾವೂ ಸೇನೆಗೆ ಸೇರಬೇಕೆಂಬ ಕನಸು ನನಸು ಮಾಡಿಕೊಂಡಿದ್ದಾರೆ.
2018ರಲ್ಲಿ ಮಿಲಿಟರಿ ಅಕಾಡೆಮಿ ಪರೀಕ್ಷೆ ಬರೆದು ಪಾಸಾಗಿದ್ದ ಇಬ್ಬರು ಸಹೋದರರು, ಇಲ್ಲೇ ತರಬೇತಿ ಪಡೆದುಕೊಂಡು ಎಲ್ಲರ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದರು. ಇವರ ಜತೆಗೆ ಈ ಸಲ ಐಎಂಎಯಿಂದ ಒಟ್ಟು 382 ಯುವ ಅಧಿಕಾರಿಗಳು ಭಾರತೀಯ ಸೇನೆ ಸೇರಿಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ 8 ಅಭ್ಯರ್ಥಿಗಳಿರುವುದು ಗಮನಾರ್ಹ ಸಂಗತಿ. ಉಳಿದಂತೆ ಜಮ್ಮು-ಕಾಶ್ಮೀರದ ಐವರು,ಪಶ್ಚಿಮ ಬಂಗಾಳದ ಐವರು,ತೆಲಂಗಾಣ,ಆಂಧ್ರಪ್ರದೇಶ,ಜಾರ್ಖಂಡ್ ಹಾಗೂ ಗುಜರಾತ್ನ ನಾಲ್ವರು ಅಭ್ಯರ್ಥಿಗಳಿದ್ದಾರೆ.