ದಾವಣಗೆರೆ: ಮಂತ್ರಿಗಿರಿ ನೀಡಲು ನಿರಾಕರಿಸಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಒತ್ತಡ ಹೇರುತ್ತಿರುವ ಕೆಪಿಸಿಸಿಗೆ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ. ಚುನಾವಣೆಗೆ ತಾವು ಸ್ಪರ್ಧಿಸಲು ಆಗುವುದಿಲ್ಲವಾದ್ದರಿಂದ ದಾವಣಗೆರೆ ಕ್ಷೇತ್ರದ ಟಿಕೆಟ್ ಬೇರೆಯವರಿಗೆ ನೀಡಿ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.
ದಾವಣಗೆರೆ ಕ್ಷೇತ್ರದ ಟಿಕೆಟ್ ಗೊಂದಲ ನಿವಾರಣೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆದಿದ್ದ ಸಭೆಗೆ ಶಾಮನೂರು ಶಿವಶಂಕರಪ್ಪ ಗೈರು ಹಾಜರಾಗಿದ್ದು, ತಮಗೆ ಘೋಷಿಸಿದ ಟಿಕೆಟ್ ಬೇರೆಯವರಿಗೆ ನೀಡುವಂತೆ ಸಂದೇಶ ರವಾನಿಸಿದ್ದಾರೆ. ಜತೆಗೆ ಬಿ ಫಾರಂ ಸ್ವೀಕರಿಸಲು ನಿರಾಕರಿಸಿದ್ದಾರೆ.
ಈ ಹಿಂದೆ ಸಚಿವ ಸ್ಥಾನ ನೀಡದ್ದಕ್ಕೆ ಕೋಪಗೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹಠ ಹಿಡಿದಿರುವ ಶಾಮನೂರು ಶಿವಶಂಕರಪ್ಪ ಮನವೊಲಿಸುವ ಪ್ರಯತ್ನ ಇನ್ನೂ ಸಹ ಮುಂದುವರಿದಿದ್ದು, ಅವರು ಮಾತ್ರ ತಮ್ಮ ನಿಲುವು ಬದಲಿಸುತ್ತಿಲ್ಲ.
ದಾವಣಗೆರೆ ಕ್ಷೇತ್ರದಲ್ಲಿ ತಾವು ಸ್ಪರ್ದೇ ಮಾಡಲು ಸಿದ್ಧರಿಲ್ಲ ಎಂದು ಶಾಮನೂರು ಹೇಳುತ್ತಿದ್ದಂತೆ, ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಅವರ ಪುತ್ರರಾದ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಅವರು ಕೂಡ ನಿರಾಕರಣೆ ಮಾಡಿದ್ದಾರೆ.
ಈ ವಿದ್ಯಮಾನದಿಂದ ಮತ್ತಷ್ಟು ಗಲಿಬಿಲಿಗೊಂಡ ದಿನೇಶ್ ಗುಂಡೂರಾವ್ ನೀವು ಶಿಫಾರಸ್ಸು ಮಾಡುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ .ಹೆಸರನ್ನು ಸೂಚಿಸಿ ಎಂದು ಶಾಮನೂರು ಅವರನ್ನು ಕೇಳಿಕೊಂಡಿದೆ. ಆಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರಿಗೆ ಟಿಕೆಟ್ ಕೊಡಿ ಎಂದು ಶಾಮನೂರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅಸಮ್ಮತಿ:
ಮಂಜುನಾಥ ಭಂಡಾರಿಗೆ ಟಿಕೆಟ್ ನೀಡಲು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಮಂಜುನಾಥ ಭಂಡಾರಿ ಕುರುಬ ಸಮುದಾಯಕ್ಕೆ ಸೇರಿದ್ದು, ಈಗಾಗಲೇ ರಾಜ್ಯದಲ್ಲಿ ಇಬ್ಬರು ಕುರುಬ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ,ಮೂರನೆಯವರಿಗೆ ಬೇಡವೆಂದು ಸೂಚಿಸಿದ್ದಾರೆ.
ಇದರಿಂದಾಗಿ ಶಾಮನೂರು ಕುಟುಂಬವನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗೆ ಕೆಪಿಸಿಸಿ ಶೋಧನೆ ನಡೆಸತೊಡಗಿದೆ. ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿಗೆ ಸ್ಪರ್ಧಿಸಲು ಆಫರ್ ನೀಡಿದೆ. ಕೊಂಡಜ್ಜಿ ಸಹ ದಾವಣಗೆರೆಯಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ.
ತೇಜಸ್ವಿ ಪಟೇಲ್ಗೆ ಬುಲಾವ್ :
ದಾವಣಗೆರೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದು ಕಷ್ಟವಾಗತೊಡಗಿದಾಗ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದು, ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಶಾಮನೂರು ಶಿವಶಂಕರಪ್ಪ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ದಾವಣಗೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವುದೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿದ್ದು, ಬಿಜೆಪಿ ವಿರುದ್ಧ ಅರ್ಹ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಹರಸಾಹಸ ಪಡುವಂತಾಗಿದೆ.