ಕೊಲಂಬೋ: ಏಷ್ಯಾದ ಪುಟ್ಟ ರಾಷ್ಟ್ರ ಶ್ರೀಲಂಕಾ ಈಸ್ಟರ್ ಭಾನುವಾರದ ಭೀಕರ ಉಗ್ರದಾಳಿಗೆ ಅಕ್ಷರಶಃ ನಲುಗಿದ್ದು, ನಿರಂತರವಾಗಿ ನಡೆಯುತ್ತಲೇ ಇರುವ ಬಾಂಬ್ ಸ್ಫೋಟದಿಂದ ಕಂಗೆಟ್ಟಿದೆ.
ಶ್ರೀಲಂಕಾದಲ್ಲಿ ನಡೆದ ಉಗ್ರದಾಳಿಯ ನಡೆಯಲಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮೂರು ಬಾರಿ ಮುನ್ಸೂಚನೆ ನೀಡಿದ್ದರೂ ನಿರ್ಲಕ್ಷಿಸಿದ ಲಂಕಾ ಸರ್ಕಾರ ಭಾರಿ ಹೊಡೆತ ಅನುಭವಿಸಿದೆ. ಆದರೆ ಸದ್ಯ ತನಿಖೆಯ ಆರಂಭಿಕ ಹಂತದಲ್ಲಿ ಲಂಕಾದ ಉನ್ನತ ಮಿಲಿಟರಿ ಮೂಲ ಆತಂಕಕಾರಿ ಮಾಹಿತಿಯೊಂದನ್ನು ನೀಡಿವೆ.
ಈಸ್ಟರ್ ಭಾನುವಾರದ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ಮೈಂಡ್ ಎಂದು ಪರಿಗಣಿಸಲಾಗಿರುವ ಝಹ್ರಾನ್ ಹಶಿಮ್ ಒಂದಷ್ಟು ಸಮಯನ್ನು ದಕ್ಷಿಣ ಭಾರತದಲ್ಲಿ ಕಳೆದಿದ್ದ ಎಂದು ಶ್ರೀಲಂಕಾದ ಭದ್ರತಾ ಮೂಲಗಳು ಹೇಳಿವೆ.
ನ್ಯಾಷನಲ್ ತೌಹೀದ್ ಜಮಾತ್ ಸಂಘಟನೆಯ ನಾಯಕನಾಗಿದ್ದ ಝಹ್ರಾನ್ ಹಶಿಮ್ ಈಸ್ಟರ್ ಭಾನುವಾರದ ಬಾಂಬ್ ದಾಳಿಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದ್ದ. ಕೊಲಂಬೋದ ಶಾಂಗ್ರೀಲಾ ಹೋಟೆಲ್ನಲ್ಲಿ ಆತ್ಮಾಹುತಿ ದಾಳಿ ನಡೆಸಿದ ಇಬ್ಬರ ಪೈಕಿ ಝಹ್ರಾನ್ ಓರ್ವ ಸುಸೈಡ್ ಬಾಂಬರ್ ಆಗಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಝಹ್ರಾನ್ ಹಶಿಮ್ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದ್ದು ಆತನ ಫೇಸ್ಬುಕ್ ಖಾತೆಯನ್ನು ಹಿಂಬಾಲಿಸುತ್ತಿದ್ದ ನೂರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.