ಕೈರೋ (ಈಜಿಪ್ಟ್): ಕಳೆದ ತಿಂಗಳು ಸೂಯೆಜ್ ಕಾಲುವೆಯಲ್ಲಿ ಹಡಗುಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದ ಬೃಹತ್ ಸರಕು ಹಡಗು ಎವರ್ ಗಿವನ್ ಅನ್ನು ಈಜಿಪ್ಟ್ ಸರ್ಕಾರ ವಶಪಡಿಸಿಕೊಂಡಿದೆ. ಕೆಲ ದಿನಗಳ ಕಾಲ ಹಡಗುಗಳ ಸಂಚಾರಕ್ಕೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಈಜಿಪ್ಟ್ ಸರ್ಕಾರ, ಎವರ್ ಗಿವನ್ ಹಡಗಿನ ಮಾಲೀಕನಿಂದ ಪರಿಹಾರಕ್ಕೆ ಒತ್ತಾಯಿಸಿತ್ತು. ಆದರೆ ಆತ ಮೌನಕ್ಕೆ ಶರಣಾಗಿದ್ದರಿಂದ ಈ ಕ್ರಮ ಕೈಗೊಂಡಿದೆ ಎಂದು ಈಜಿಪ್ಟ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಡಗಿನ ಮಾಲೀಕನರಾದ ಜಪಾನಿನ ಶೋಯಿ ಕಿಸೆನ್ ಕೈಶಾ ಲಿಮಿಟೆಡ್‌ನೊಂದಿಗೆ ಪರಿಹಾರದ ಮೊತ್ತವನ್ನು ಇತ್ಯರ್ಥಪಡಿಸುವವರೆಗೆ ಎವರ್ ಗಿವನ್ ಅನ್ನು ದೇಶದೊಳಕ್ಕೆ ಬಿಡಲು ಅನುಮತಿಸುವುದಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಒಸಾಮಾ ರಾಬಿ ಹೇಳಿದ್ದಾರೆ.
ಈ ಹಡಗು ಅಧಿಕೃತವಾಗಿ ಬಂಧಿಸಲ್ಪಟ್ಟಿದೆ, ಆದರೂ ಮಾಲೀಕರು ಏನನ್ನೂ ಪಾವತಿಸಲು ಬಯಸುವುದಿಲ್ಲ ಎಂಬುದಾಗಿ ತಿಳಿದು ಬಂದಿದ್ದು. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಈಜಿಪ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲುವೆ ಪ್ರಾಧಿಕಾರ ಎಷ್ಟು ಹಣವನ್ನು ಬಯಸುತ್ತಿದೆ ಎಂದು ರಾಬಿ ಹೇಳಲಿಲ್ಲ. ಆದಾಗ್ಯೂ, ಕನಿಷ್ಠ 900 ಮಿಲಿಯನ್ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದರು. ಆ ಮೊತ್ತವು ರಕ್ಷಣಾ ಕಾರ್ಯಾಚರಣೆ, ಸ್ಥಗಿತಗೊಂಡ ಕಾಲುವೆ ದಟ್ಟಣೆಯ ವೆಚ್ಚಗಳು ಹಾಗೂ ಎವರ್ ಗಿವನ್ ಕಾಲುವೆಯನ್ನು ನಿರ್ಬಂಧಿಸಿದ ವಾರದ ಸಾರಿಗೆ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಈ ನಡುವೆ ಹಡಗು ಹಾಳಾಗಿ ನಿಂತಿದ್ದಕ್ಕೆ ಕಾಲುವೆ ಪ್ರಾಧಿಕಾರದಿಂದ ಯಾವುದೇ ತಪ್ಪಾಗಿಲ್ಲ ಎಂದು ಕಾಲುವೆಯ ಮುಖ್ಯಸ್ಥ ರಾಬಿ ಇದೇ ವೇಳೆ ಸ್ಪಷ್ಟನೆಯನ್ನೂ ಕೂಡಾ ಕೊಟ್ಟಿದ್ದಾರೆ.
ಏನಿದು ಎವರ್ ಗಿವನ್
ಇದು ಏಷ್ಯಾ ಮತ್ತು ಯುರೋಪ್ ನಡುವೆ ಸುಮಾರು 3.5 ಬಿಲಿಯನ್ ಮೊತ್ತದ ಸರಕುಗಳನ್ನು ಸಾಗಿಸುವ ಹಡಗು. ಇದು ಮಾರ್ಚ್ 23 ರ ಆಸುಪಾಸಿನಲ್ಲಿ ಏಷ್ಯಾದ ಸಿನಾಯ್ ಪರ್ಯಾಯ ದ್ವೀಪದಿಂದ ಆಫ್ರಿಕಾವನ್ನು ವಿಭಜಿಸುವ ಕಿರಿದಾದ, ಮಾನವ ನಿರ್ಮಿತ ಕಾಲುವೆಯಲ್ಲಿ ಪ್ರಯಾಣ ಬೆಳೆಸಿತ್ತು. ಅಲ್ಲಿಂದ ಸೂಯೆಜ್ ನಗರದ ಸಮೀಪ ದಕ್ಷಿಣ ದ್ವಾರದ ಉತ್ತರಕ್ಕೆ ಸುಮಾರು 6 ಕಿಲೋಮೀಟರ್ (3.7 ಮೈಲಿ) ಉತ್ತರಕ್ಕೆ ಕಾಲುವೆಯ ಒಂದೇ ಪಥದ ದಂಡೆಗೆ ಅಪ್ಪಳಿಸಿತ್ತು. ಪರಿಣಾಮ ಸೂಯಜ್ ಕಾಲುವೆಯಲ್ಲಿ ಇನ್ನಿತರ ಹಡಗುಗಳ ಸಂಚಾರಕ್ಕೆ ಸ್ಥಳ ಇಲ್ಲದಂತಾಗಿ ಹಡಗುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಭಾರಿ ನಷ್ಟ ಉಂಟಾಗಿತ್ತು.
ಮಾರ್ಚ್ 29 ರಂದು, ರಕ್ಷಣಾ ತಂಡಗಳು ಎವರ್ ಗಿವನ್ ಅನ್ನು ಮುಕ್ತಗೊಳಿಸಿದ್ದವು. ಆದರೆ ಇದು ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಸೂಯೆಜ್ ಅನ್ನು ಮುಚ್ಚಿಹಾಕಿತ್ತು. ಅಲ್ಲದೆ ಕಡಲ ಮಾರ್ಗದ ವ್ಯವಹಾರದಲ್ಲಿ ದಿನಕ್ಕೆ ಶತಕೋಟಿ ಡಾಲರ್ಗಳನ್ನೇ ನಿಲ್ಲಿಸಿತ್ತು. ಈ ಹಡಗು ಈಜಿಪ್ಟ್‌ನ ಗ್ರೇಟ್ ಬಿಟ್ಟರ್ ಸರೋವರದಲ್ಲಿ ಈಗ ನಿಷ್ಕ್ರಿಯವಾಗಿ ನಿಂತಿದೆ.