ಗುರುಮಠಕಲ್: ಕೊರೊನಾ ಸಾಂಕ್ರಾಮಿಕ ಸೋಂಕಿನ ಸರಣಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕಿನಾದ್ಯಂತ 3 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ.
ಜಿಲ್ಲಾಡಳಿತದ ಆದೇಶದಂತೆ ಪೌರಾಡಳಿತವು ಕಳೆದ ಎರಡು ದಿನಗಳಿಂದ ಸತತವಾಗಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಡಂಗುರ ಮತ್ತು ಆಟೊ ಧ್ವನಿವರ್ಧಕ ಹಾಗೂ ಹಳ್ಳಿಗಳ ಆಯಕಟ್ಟಿನ ಸ್ಥಳಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಅಂಟಿಸಲಾಗಿದ್ದು, ಗ್ರಾಮ ಪಂಚಾಯತ್ ಕಾರ್ಯಪಡೆ ಈಗಾಗಲೇ ಕಾರ್ಯನಿರತವಾಗಿದೆ.
ಮಾರ್ಗಸೂಚಿಯಂತೆ ಆಸ್ಪತ್ರೆ, ಔಷಧ ಹಾಗೂ ಹಾಲಿನ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳ ಬಂದ್ ಮಾಡುವಂತೆ ಸೂಚಿಸಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ದಿನಸಿ ಅಂಗಡಿಗಳು,ತರಕಾರಿ ಮಾರುಕಟ್ಟೆಗಳು ಜನರಿಂದ ತುಂಬಿತ್ತು. ಕೊರೊನಾ ಸೋಂಕಿನ ಚೈನ್ ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆಯೂ ಜನ ಸಂಚಾರ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕಾಗಿ ಸನ್ನದ್ದವಾಗಿದೆ.