ಕೊಲಂಬೋ: ಈಸ್ಟರ್ ಭಾನುವಾರದ ಭೀಕರ ಉಗ್ರದಾಳಿಯ ಬಳಿಕ ಮತ್ತೊಮ್ಮೆ ದ್ವೀಪ ರಾಷ್ಟ್ರ ಶ್ರೀಲಂಕಾ ಕೋಮು ಗಲಭೆಗೆ ಸಾಕ್ಷಿಯಾಗಿದೆ. ಪರಿಣಾಮ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಫೇಸ್ಬುಕ್ ಪೋಸ್ಟ್ ಒಂದರಿಂದ ಉದ್ರಿಕ್ತಗೊಂಡ ಗುಂಪೊಂದು ಇನ್ನೊಂದು ಗುಂಪಿಗೆ ಸೇರಿದ್ದ ಅಂಗಡಿ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದೆ. ಭಾನುವಾರ ವಾಯವ್ಯ ಶ್ರೀಲಂಕಾದ ಚಿಲಾ ಪಟ್ಟಣದ ಹಲವು ಪ್ರದೇಶಗಳಲ್ಲಿ ದಾಳಿಗಳು ನಡೆದಿವೆ.

ದಾಳಿ ನಡೆದ ತಕ್ಷಣವೇ ಭದ್ರತಾ ಪಡೆ ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸುವ ಕೆಲಸ ಮಾಡಿದೆ.
ಹೆಚ್ಚು ನಗಬೇಡಿ, ಒಂದು ದಿನ ನೀವು ಅಳುತ್ತೀರಾ (Don't Laugh More, 1 Day U Will Cry) ಅನ್ನುವ ಪೋಸ್ಟ್‌ವೊಂದನ್ನ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಹಾಕಿದ್ದ. ಇದನ್ನು ಎಚ್ಚರಿಕೆ ಎಂದು ಪರಿಗಣಿಸಿದ ಇನ್ನೊಂದು ಗುಂಪಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ದಾಳಿಯ ಹಿನ್ನೆಲೆಯಲ್ಲಿ ಪ್ರಸ್ತುತ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಸುಳ್ಳು ಸುದ್ದಿ ರವಾನೆಯಾಗುವ ಸಾಧ್ಯತೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.