ಲಕ್ಷದ್ವೀಪ: ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ವಿರುದ್ಧದ ದೇಶದ್ರೋಹ ಪ್ರಕರಣವನ್ನು "ಅನ್ಯಾಯ" ಎಂದು ಹೇಳಿರುವ ಭಾರತೀಯ ಜನತಾ ಪಕ್ಷದ ಜನರಲ್ ಅಬ್ದುಲ್ ಹಮೀದ್ ಸೇರಿ 15 ಮಂದಿ ಬಿಜೆಪಿ ಕಾರ್ಯಕರ್ತರು ಇಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಸಿ. ಅಬ್ದುಲ್ ಖಾದರ್ ಹಾಜಿ ಅವರು ನೀಡಿದ ದೂರಿನ ಆಧಾರದ ಮೇಲೆ ಜೂನ್ 10 ರಂದು ದೇಶದ್ರೋಹ ಆರೋಪದ ಮೇಲೆ ಆಯಿಷಾ ಸುಲ್ತಾನ ವಿರುದ್ಧ ಲಕ್ಷದ್ವೀಪ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮಲಯಾಳಂ ಟಿ.ವಿ ಚಾನೆಲ್‌ನಲ್ಲಿ ನಡೆದ ಚರ್ಚೆಯ ವೇಳೆ ಲಕ್ಷದ್ವೀಪದಲ್ಲಿ ಕೋವಿಡ್-19 ಹರಡಲು ಕೇಂದ್ರ ಸರ್ಕಾರವು ಜೈವಿಕ ಅಸ್ತ್ರಗಳನ್ನು ಬಳಸಿದೆ ಎಂದು ಆಯಿಷಾ ಆರೋಪಿಸಿದ್ದರು ಎನ್ನಲಾಗಿದೆ. ಆಯಿಷಾ ಸುಲ್ತಾನಾ ದೇಶ ವಿರೋಧಿ ಕೃತ್ಯ ಎಸಗಿದ್ದಾರೆಂದು ಬಿಜೆಪಿ ಮುಖಂಡರ ದೂರಿನಲ್ಲಿ ಆರೋಪಿಸಲಾಗಿದ್ದು, ಇದು ಕೇಂದ್ರ ಸರ್ಕಾರಕ್ಕೆ ಕಳಂಕ ತಂದಿದೆ ಎಂದು ದೂರಿದ್ದಾರೆ.
ಇದನ್ನು ಓದಿ: ಲಕ್ಷದ್ವೀಪದ ನಟಿ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಕೇಸ್ ದಾಖಲು
ಇನ್ನು"ಆಯಿಷಾ ಸುಲ್ತಾನಾ ವಿರುದ್ಧದ ಪ್ರಕರಣವು ಸಂಪೂರ್ಣವಾಗಿ ಅನ್ಯಾಯದ ಕೃತ್ಯವಾಗಿದೆ. ನಾವೆಲ್ಲರೂ ಈ ಪ್ರಕರಣವನ್ನು ಬಲವಾಗಿ ಪ್ರತಿಭಟಿಸುತ್ತೇವೆ. ನಾನು ಮತ್ತು ಇತರರೊಂದಿಗೆ ರಾಜೀನಾಮೆ ನೀಡಿದ್ದೇನೆ" ಎಂದು ಹಮೀದ್ ಮುಲ್ಲಿಪುಳ ಹೇಳಿದರು. ಲಕ್ಷದ್ವೀಪ ಆಡಳಿತವು ಜಾರಿಗೆ ತರುತ್ತಿರುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.