ನವದೆಹಲಿ: ಇವಿಎಂ ದೋಷದ ವಿಚಾರವನ್ನು ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ದು ನೇತೃತ್ವದಲ್ಲಿ ಸುಪ್ರೀಂ ಅಂಗಳಕ್ಕೆ ಕೊಂಡೊಯ್ದ ವಿರೋಧ ಪಕ್ಷಗಳಿಗೆ ಹಿನ್ನೆಡೆಯಾಗಿದೆ. ದೇಶದೆಲ್ಲೆಡೆ ವಿವಿಪ್ಯಾಟ್ ಅಳವಡಿಕೆಯಾಗಿರುವ ಒಟ್ಟು ಇವಿಎಂಗಳಲ್ಲಿ ಶೇ 50 ರಷ್ಟನ್ನು ತಾಳೆಗೊಳಪಡಿಸಲು ಚುನಾವಣಾ ಆಯೋಗಕ್ಕೆ ಆದೇಶಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ಈ ಬಗ್ಗೆ ವಿರೋಧ ಪಕ್ಷಗಳನ್ನು ಪ್ರತಿನಿಧಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ ಅವರ ಕಿವಿ ಹಿಂಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು, ನಿಮಗೆ ಇನ್ನೆಷ್ಟು ಎಣಿಕೆ ಕಾರ್ಯದ ಅವಶ್ಯಕತೆ ಇದೆ? ಎಂದು ಖಾರವಾಗಿ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಸಿಂಘ್ವಿ, ನಾವು ಶೇ 50 ರಷ್ಟು ಕೌಂಟಿಂಗ್ ಬಯಸುತ್ತಿದ್ದೇವೆ. ಆದ್ರೆ, ಶೇ 33 ಅಥವಾ ಶೇ 25 ಕ್ಕಾದ್ರೂ ನಾವು ತೃಪ್ತಿ ಹೊಂದಲಿದ್ದೇವೆ ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸುಪ್ರೀಂ ತನ್ನ ಹಳೆಯ ಆದೇಶದಿಂದ ಹಿಂದೆ ಸರಿಯಲಿಲ್ಲ.
ಸುಪ್ರೀಂ ಈ ಹಿಂದೆ ಹೇಳಿದ್ದೇನು?
ದೇಶದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಪ್ಯಾಟ್ ಸ್ಲಿಪ್ ಹೊಂದಿರುವ 5 ಇವಿಎಂ ಮತಯಂತ್ರಗಳನ್ನು ಪರಿಶೀಲನೆಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಇದು ವಿರೋಧ ಪಕ್ಷಗಳಿಗೆ ತೃಪ್ತಿಯಾಗಿಲ್ಲ.
ಚು. ಆಯೋಗ ಹೇಳಿದ್ದೇನು?
ವಿರೋಧ ಪಕ್ಷಗಳ ಬೇಡಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಚುನಾವಣಾ ಆಯೋಗ, ವಿವಿಪ್ಯಾಟ್ ಚೀಟಿಗಳನ್ನು ಇವಿಎಂ ಜೊತೆ ದೈಹಿಕವಾಗಿ ಪರಿಶೀಲಿಸುವ ಕಾರ್ಯವನ್ನು ಶೇ 50 ಕ್ಕೇರಿಸಿದರೆ ಲೋಕಸಭೆ ಚುನಾವಣೆಯ ಫಲಿತಾಂಶ ಆರು ದಿನಗಳಷ್ಟು ತಡವಾಗಲಿದೆ ಎಂದು ಹೇಳಿತ್ತು.