ಬೆಂಗಳೂರು: ರಸ್ತೆ ಸಂಚಾರಿಗಳನ್ನು ಅಡ್ಡಗಟ್ಟಿ ಬೆದರಿಸಿ ಚಾಕುವಿನಿಂದ ಹಲ್ಲೆ ಮಾಡುತ್ತಿದ್ದ ರೌಡಿಯನ್ನು ಸೆರೆ ಹಿಡಿಯಲು ಹೋದ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆಗೆ ಮುಂದಾದಾಗ ಪ್ರತಿಯಾಗಿ ಗುಂಡು ಹಾರಿಸಿದ ಘಟನೆ ನಡೆದಿದೆ.
ಅತ್ತಿಬೆಲೆ ಟಿವಿಎಸ್ ರಸ್ತೆಯ ನಾಕಾಬಂದಿ ಬಳಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದಾಗ ರೌಡಿಶೀಟರ್ ಆರೋಪಿ ಶಶಾಂಕ್ ಬಲ ಮೊಳಕಾಲಿಗೆ ಒಂದು ಗುಂಡು ತಗುಲಿದೆ. ಶಶಾಂಕ್ ಟಿವಿಎಸ್ ರಸ್ತೆಯಲ್ಲಿ ತಡರಾತ್ರಿ ಡಿಯೋ ಬೈಕ್ನಲ್ಲಿ ತಪ್ಪಿಸಿಕೊಳ್ಳುವಾಗ ಪೊಲೀಸರ ಮೇಲೆಯೇ ರೇಜರ್ನಿಂದ ಹಲ್ಲೆ ಮಾಡಿದ್ದಾನೆ.
ಪೊಲೀಸ್ ಇಲಾಖೆಯ ಪ್ರಕಾಶ್ ಎಡಗೈಗೆ ರೇಜರ್ ತಾಕಿಸಿ ಮಾರಣಾಂತಿಕ ಹಲ್ಲೆಗೆ ಮುಂದಾದಾಗ ಎಚ್ಚೆತ್ತುಕೊಂಡ ಪಿಸಿಐ ವಿ.ಬಾಲಾಜಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ರೌಡಿ ಶೀಟರ್ ಶಶಾಂಕ್ ಬಲಮೊಣಕಾಲಿಗೆ ಗುಂಡು ತಗುಲಿದೆ. ಶಶಾಂಕ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳು ಪೊಲೀಸ್ ಇಲಾಖೆಯ ಪ್ರಕಾಶ್ ಅವರನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಬಾರಿ ಆನೇಕಲ್ನ ಎಂ.ಮೇಡಹಳ್ಳಿಯ ಶುಭ ಅಪಾರ್ಟ್ಮೆಂಟ್ ನಿವಾಸಿ ಕುಮಾರ್ ಎಂಬುವರು ಬೆಳ್ಳಂದೂರಿನಿಂದ ಬರುವ ವೇಳೆ ಎರಡು ಬೈಕ್ಗಳಲ್ಲಿ ಬಂದು ಚಾಕು ತೋರಿಸಿ ಉಂಗುರ, ಮೊಬೈಲ್, ಪರ್ಸ್ ಕಿತ್ತು ಎಟಿಎಂಗೆ ಕರೆದುಕೊಂಡು ಹೋಗಿ ಹಣ ಪಡೆಯಲು ಯತ್ನಿಸಿದ್ದ. ಎಟಿಎಂನಲ್ಲಿ ಹಣ ಬರದ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ಎಟಿಎಂನಿಂದ ಹೊರಗೆ ಎಳೆದುಕೊಂಡು ಹೋಗಿದ್ದ. ಈ ಹಿನ್ನೆಲೆಯಲ್ಲಿ ಬಂದ ದೂರಿನ ಮೇಲೆ ಪೊಲೀಸರು ಶಶಾಂಕ್ಗಾಗಿ ಬಲೆ ಬೀಸಿದ್ದರು.
ಶಶಾಂಕ್ ಜೊತೆ ರಾಕಿ, ರೇವಂತ್ ಮತ್ತು ಸಲ್ಮಾನ್ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಅಲ್ಲದೆ ಬೆಂಗಳೂರು ನಗರದ ಹುಳಿಮಾವು ಠಾಣೆಯಲ್ಲಿ ಒಂದು ಕೊಲೆ, ರಾಜಾಜಿ ನಗರ –ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪಿ ಹಾಗೂ ಇದೇ ಠಾಣೆಯಲ್ಲಿ ಶಶಾಂಕ್ ರೌಡಿ ಶೀಟರ್ ಆಗಿದ್ದಾನೆ. ಇನ್ನು ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಂನಿವಾಸ್ ಸೆಪಟ್, ಎಎಸ್ಪಿ ವಿಜೆ ಸಜೀತ್, ಡಿವೈಎಸ್ಪಿ ನಂಜುಂಡೇಗೌಡ, ಸಿಐ ವಿ.ಬಾಲಾಜಿ, ಎಸ್ಐ ಎಂ.ಕೆ.ಮುರಳಿಧರ ಸಿಬ್ಬಂದಿ ಸಮೇತ ಆಗಮಿಸಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.