ಶಿವಮೊಗ್ಗ: ಕೊರೊನಾ ಎರಡನೇ ಅಲೆಯಲ್ಲಿ ವೈದ್ಯರ ಸೇವೆಯ ಜೊತೆ ಆಕ್ಸಿಜನ್ ವೆಂಟಿಲೇಟರ್ ಹಾಗೂ ಆಕ್ಸಿಜನ್ ಕಾನ್ಸಟ್ರೇಟರ್ ಪ್ರಮುಖ ಪಾತ್ರ ವಹಿಸುತ್ತಿವೆ. ಇದನ್ನು ಮನಗಂಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಿವಮೊಗ್ಗ ಶಾಖೆಯು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 16 ಲಕ್ಷ ರೂ. ಮೌಲ್ಯದ ಜೀವ ರಕ್ಷಕ ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ.
ಸಿಮ್ಸ್ ಆವರಣದಲ್ಲಿ ಶಿವಮೊಗ್ಗ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಇವರು ಸಿಮ್ಸ್ ನಿರ್ದೇಶಕರಾದ ಡಾ. ಸಿದ್ದಪ್ಪನವರಿಗೆ ಆಕ್ಸಿಜನ್ ವೆಂಟಿಲೇಟರ್ ಹಾಗೂ ಕಾನ್ಸಂಟ್ರೇಟರ್ಗಳನ್ನು ಹಸ್ತಾಂತರ ಮಾಡಿದರು.
16 ಲಕ್ಷ ರೂ. ಮೌಲ್ಯದ ವೆಂಟಿಲೇಟರ್ ಹಾಗೂ 2 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ನೀಡಲಾಗಿದೆ. ಇದರ ಜೊತೆಗೆ ಕಾನ್ಸಂಟ್ರೇಟರ್ ಹಾಗೂ ವೆಂಟಿಲೇಟರುಗಳಿಗೆ ಬೇಕಾದ ಉಪಕರಣಗಳನ್ನು ನೀಡಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಈ ರೀತಿಯ ಜೀವ ಉಳಿಸುವ ಪರಿಕರಗಳನ್ನು ನೀಡಿದೆ.
ರೆಡ್ ಕ್ರಾಸ್ನಿಂದ ಮುಂದಿನ ದಿನಗಳಲ್ಲಿ ಸೋಂಕಿತರನ್ನು ನೋಡಲು ಬರುವ ಸಂಬಂಧಿಕರಿಗೆ ಪಿಪಿಇ ಕಿಟ್ಗಳನ್ನು ನೀಡಲಾಗುವುದು ಎಂದು ರೆಡ್ಕ್ರಾಸ್ ಹೇಳಿದೆ.
ಶಿವಮೊಗ್ಗ ಜಿಲ್ಲಾ ರೆಡ್ ಕ್ರಾಸ್ನ ಸಭಾಪತಿ ಎಸ್.ಪಿ.ದಿನೇಶ್, ರಾಜ್ಯ ರೆಡ್ ಕ್ರಾಸ್ನ ರಾಜ್ಯ ಉಪಾಧ್ಯಕ್ಷ ಡಾ. ಕುಮಾರ್, ಜಿ.ಪಂ ಸಿಇಓ ಶ್ರೀಮತಿ ವೈಶಾಲಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಹಾಗೂ ವಸಂತ ಹೊಂಬಳಿದಾರ್ ಹಾಜರಿದ್ದರು.