ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ಲೀನ್ ಚೀಟ್ ನೀಡಲಿದೆಯಾ ಎಂಬ ಪ್ರಶ್ನೆಗೆ ಹೌದು ಎನ್ನುತ್ತಿವೆ ಬಲ್ಲ ಮೂಲಗಳು.
ಆತ್ಯಾಚಾರ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸುವ ಸಾಧ್ಯತೆಯಿದೆ.
ತನಿಖಾಧಿಕಾರಿಗಳ ಮುಂದೆ ಸಂತ್ರಸ್ತೆ ನೀಡಿರುವ ಹೇಳಿಕೆ ಹಾಗೂ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸಮ್ಮತಿ ಮೇರೆಗೆ ಸೆಕ್ಸ್ ನಡೆಸಿರುವುದನ್ನು ಕಂಡು ಬಂದಿದ್ದು, ಇದರಿಂದ ತನಿಖೆ ಆಯಾಮವೇ ಬದಲಾಗಲಿದೆ ಎನ್ನಲಾಗುತ್ತಿದೆ.
ಕಳೆದ ಮಾ. 26 ರಂದು ಸಿಡಿ ಯುವತಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಆತ್ಯಾಚಾರ ಮಾಡಿದ್ದಾರೆ ಎಂದು ಜಾರಕಿಹೊಳಿ ವಿರುದ್ಧ ಆರೋಪಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದನ್ವಯ ಎಫ್ಐಆರ್ ದಾಖಲಾಗಿತ್ತು. ರಾಜಕೀಯ ಅಸ್ಥಿರಗೊಳಿಸಲು ಹಾಗೂ ಷಡ್ಯಂತ್ರ ರೂಪಿಸಿ ಲೈಂಗಿಕ ಹಗರಣಕ್ಕೆ ಥಳಕು ಹಾಕಿಕೊಂಡಿದ್ದಾರೆ ಎಂದು ಆಪಾದಿಸಿ ಸದಾಶಿವ ನಗರ ಪೊಲೀಸ್ ಠಾಣೆಗೆ ಜಾರಕಿಹೊಳಿ ದೂರು ನೀಡಿದ್ದರು.
ಎರಡು ಪ್ರಕರಣಗಳು ಎಸ್ಐಟಿಗೆ ವರ್ಗಾವಣೆಯಾಗಿತ್ತು. ತನಿಖೆಯಲ್ಲಿ ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಮಹಿಳೆಯೇ ಪದೇ ಪದೇ ಸಚಿವರಿಗೆ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ದೊರೆತಿದ್ದ ವಿಡಿಯೋದಲ್ಲಿ ಯುವತಿಗೆ ಬಲವಂತವಾಗಿ ದೌರ್ಜನ್ಯ ಎಸಗಿರುವುದು ಕಂಡಬಂದಿಲ್ಲ. ಇಬ್ಬರ ನಡುವೆ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ನಿರೀಕ್ಷಣಾ ಜಾಮೀನು ಕೋರಿ ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ಸಲ್ಲಿಸಿದ್ದ ಅರ್ಜಿ ನಾಳೆ ನ್ಯಾಯಾಲಯಕ್ಕೆ ಬರಲಿದೆ. ಶಂಕಿತರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಂದಾಗಿದೆ. ಸದಾಶಿವನಗರ ಪೊಲೀಸ್ ಠಾಣೆಗೆ ರಮೇಶ್ ಜಾರಕಿಹೊಳಿ ನೀಡಿದ ದೂರು ಜಾಮೀನು ಕೋರಿ ಶಂಕಿತರು ಅರ್ಜಿ ಸಲ್ಲಿಸಿದ್ದಾರೆ.