ಶಿವಮೊಗ್ಗ: ರಾಜ್ಯ ಸರ್ಕಾರ ಘೋಷಿಸಿರುವ ಎರಡನೇ ಹಂತದ ಆರ್ಥಿಕ ಪ್ಯಾಕೇಜ್‌ನಲ್ಲಿ ಮುಜರಾಯಿ ಅರ್ಚಕರು ಹಾಗೂ ಅಡುಗೆಯವರು ಎಂದು ನಮೂದಿಸಿದ್ದು, ಇದರಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ಅಡುಗೆ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ. ಹಾಗಾಗಿ ಈ ಪ್ಯಾಕೇಜಿನಲ್ಲಿ ಮುಜರಾಯಿ ಎಂಬ ಪದ ತೆಗೆದು ಎಲ್ಲಾ ಅಡುಗೆ ಕಾರ್ಮಿಕರು, ಅಡುಗೆ ಸಹಾಯಕ ಸಿಬ್ಬಂದಿಗೆ ಪರಿಹಾರ ನೀಡಬೇಕೆಂದು ವಿವಿಧ ಸಂಘಗಳ ಒಕ್ಕೂಟ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಅಡುಗೆದಾರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಜನ ಅಡುಗೆ-ಸಹಾಯಕರು ಹಾಗೂ ಅಡುಗೆ ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಮುಜರಾಯಿ ಇಲಾಖೆಯ ಅರ್ಚಕರು ಮತ್ತು ಅಡುಗೆಯವರು ಎಂದು ಪ್ರತ್ಯೇಕಿಸುವ ಮೂಲಕ ಸಾವಿರಾರು ಅಡುಗೆ ಕಾರ್ಮಿಕರನ್ನು ತೀವ್ರವಾಗಿ ನಿರ್ಲಕ್ಷಿಸಿದೆ. ಹಾಗಾಗಿ ಮುಖ್ಯಮಂತ್ರಿಗಳು ಅಡುಗೆ ಕಾರ್ಮಿಕರನ್ನು ಅಸಂಘಟಿತ ವಲಯ ಎಂದು ಘೋಷಿಸಿ ಪರಿಹಾರ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷವೂ ಸಹ ಸರ್ಕಾರ ಯಾವುದೇ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಿತ್ತು. ಈ ವರ್ಷವು ಸಹ ನಿರ್ಲಕ್ಷಿಸಲಾಗಿದೆ. ಅಡುಗೆ ಕಾರ್ಮಿಕರಿಗೆ ಕಳೆದೆರಡು ವರ್ಷದಿಂದ ಯಾವುದೇ ಸಭೆ, ಸಮಾರಂಭಗಳು ನಡೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಎಲ್ಲಾ ಅಡುಗೆ ಕಾರ್ಮಿಕರಿಗೆ ಪರಿಹಾರ ಒದಗಿಸಬೇಕು ಜೊತೆಗೆ ಅಡುಗೆದಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು ಎಂದರು.