ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುವ ವೇಳೆ ಪ್ಯಾಟ್ ಕಮ್ಮಿನ್ಸ್ ಎಸೆದ ಬೌನ್ಸರ್ನಿಂದ ಬೆರಳು ಮುರಿತಕ್ಕೊಳಗಾಗಿರುವ ಧವನ್ಗೆ ಮೂರು ವಾರಗಳ ವಿಶ್ರಾಂತಿ ಅಗತ್ಯವಿದ್ದು, ಅವರ ಬದಲಿಗೆ ಪ್ರಾಥಮಿಕ ವಿಶ್ವಕಪ್ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ರಿಷಭ್ ಪಂತ್ ಆಯ್ಕೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ 15ರಂದು ಬಿಡುಗಡೆಗೊಂಡಿದ್ದ ಪ್ರಾಥಮಿಕ ವಿಶ್ವಕಪ್ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಪಂತ್ಗೆ ಅದೃಷ್ಠ ಒಲಿದುಬಂದಿದೆ. ಆರಂಭಿಕ ಆಟಗಾರ ಧವನ್ಗೆ 3 ವಾರಗಳ ವಿಶ್ರಾಂತಿ ಅಗತ್ಯವಿರುದರಿಂದ ರಿಷಭ್ ಪಂತ್ಗೆ ಬಿಸಿಸಿಐ ಮೂಲಗಳಿಂದ ಈಗಾಗಲೇ ಕರೆ ಬಂದಿದೆ ಎನ್ನಲಾಗುತ್ತಿದೆ. ಇನ್ನು 48 ಗಂಟೆಗಳಲ್ಲಿ ಇಂಗ್ಲೆಂಡ್ ಫ್ಲೈಟ್ ಏರಲಿದ್ದಾರೆ ಎಂದು ತಿಳಿದು ಬಂದಿದೆ.
ಆರಂಭಿಕ ಸ್ಥಾನಕ್ಕೆ ರೋಹಿತ್ ಜೊತೆಗೆ ಕನ್ನಡಿಗ ರಾಹುಲ್ ಕಣಕ್ಕಿಳಿಯುವುದು ಬಹತೇಕ ಖಚಿತವಾಗಿದೆ. ಇನ್ನು ಪಂತ್ ಆಯ್ಕೆ ಖಚಿತವಾದರೆ ರಾಹುಲ್ರ 4ನೇ ಸ್ಥಾನಕ್ಕೆ ಕಾರ್ತಿಕ್, ವಿಜಯ್ ಶಂಕರ್ ಹಾಗೂ ಪಂತ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.
ಧವನ್ ಬದಲಿಗೆ ಪಂತ್ರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ ಮತ್ತೊಬ್ಬ ಯುವ ಆಟಗಾರ ಮುಂಬೈನ ಶ್ರೇಯಸ್ ಅಯ್ಯರ್ ಹಾಗೂ ರಹಾನೆ ಹೆಸರು ಸಹಾ ಕೇಳಿ ಬರುತ್ತಿದೆ. ಜೂನ್ 12 ರಂದು ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತನ್ನ 4 ನೇ ಪಂದ್ಯವಾಡಲಿದ್ದು, ಅಷ್ಟರೊಳಗೆ ಬಿಸಿಸಿಐ ಧವನ್ ಬದಲಿಗೆ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.