ಬೆಂಗಳೂರು: 31ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ವೈಟ್ ಫೀಲ್ಡ್ ಒಳನಾಡಿನ ಕಂಟೇನರ್ ಡಿಪೋ ತಲುಪಿದೆ. ಈ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು 9ರಂದು ಬೆಳಗ್ಗೆ 2 ಗಂಟೆಗೆ ಗುಜರಾತ್‌ನ ಕಾನಾಲಸ್‌ನಿಂದ ಲೋಡ್ ಮಾಡಿಕೊಂಡು ಪ್ರಾಯಾಣ ಬೆಳೆಸಿತ್ತು.
ಈ ರೈಲು ಆರು ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ 113.96 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ತಂದಿದೆ. ಇಲ್ಲಿಯವರೆಗೆ ಕರ್ನಾಟಕವು ರೈಲಿನ ಮೂಲಕ 3563.15 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ. ಭಾರತೀಯ ರೈಲ್ವೆ ಇದುವರೆಗೆ 400ಕ್ಕೂ ಹೆಚ್ಚು ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ನಡೆಸಿದೆ ಮತ್ತು 1648 ಟ್ಯಾಂಕರ್‌ಗಳ ಮೂಲಕ 28473 ಟನ್‌ಗಳಷ್ಟು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ. ಹಾಗೆಯೇ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರ ನೀಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ತಂದ ಬಿಕ್ಕಟ್ಟಿನ ನಡುವೆಯೂ ಭಾರತೀಯ ರೈಲ್ವೆ ದೇಶಾದ್ಯಂತ ಪೂರೈಕೆ ಸರಪಳಿಗಳನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಅಗತ್ಯ ಸರಕುಗಳ ಚಲನೆ, ವೈದ್ಯಕೀಯ ಆಮ್ಲಜನಕ ಇತ್ಯಾದಿ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡುವ ಮೂಲಕ ಜನರಿಗೆ ಸಹಾಯ ಮಾಡುತ್ತಿದೆ. ಈ ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆಯನ್ನು ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ರಚಿಸಿ ಸಾಗಣಿಕೆಗೆ ಅನುವು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ಈಗ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರೆತೆ ಆಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಬೆಂಗಳೂರಿಗೆ ಆಗಮಿಸಿರುವ ವೈದ್ಯಕೀಯ ಆಮ್ಲಜನಕವನ್ನು ಅಗತ್ಯವಿರುವ ಆಸ್ಪತ್ರೆಗೆ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಮ್ಲಜನಕ ಹಂಚಿಕೆ ಮಾಡಲಾಗಿದೆ.