ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಜಿಲ್ಲಾಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆಯೂ ದಿನೆ ದಿನೆ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಆಕ್ಸಿಜನ್ ಅಭಾವ ಇಲ್ಲ. ಆದರೆ, ಆಕ್ಸಿಜನ್ ಸಂಪರ್ಕ ಇರುವ ಬೆಡ್‍ಗಳ ಕೊರತೆ ಎದುರಾಗುತ್ತಿದೆ. ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತು ಕೊಳ್ಳಬೇಕಿದೆ.
ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ 500ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಕಳೆದೆರಡು ದಿನಗಳಿಂದ ಜಿಲ್ಲಾಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಈವರೆಗೂ ಕೋವಿಡ್ ಜೊತೆಗೆ ಸಾಮಾನ್ಯ ರೋಗಿಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. 1080 ಬೆಡ್‍ಗಳ ಸಾಮರ್ಥ್ಯ ಇರುವ ಜಿಲ್ಲಾಸ್ಪತ್ರೆಯಲ್ಲಿ 300 ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ.
ಇನ್ನುಳಿದ ಬೆಡ್‍ಗಳನ್ನು ಸಾಮಾನ್ಯ ರೋಗಿಗಳಿಗೆ ಕಾಯ್ದಿರಿಸಲಾಗಿದೆ. ಅಗತ್ಯ ಬಿದ್ದರೆ ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲಾಸ್ಪತ್ರೆ ಸಂಪೂರ್ಣ ಕೋವಿಡ್ ವಾರ್ಡ್ ಆಗಿ ಪರಿವರ್ತಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ.
ಹೌಸ್‍ಫುಲ್‍ನತ್ತ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್:
1080 ಬೆಡ್ ಸಾಮರ್ಥ್ಯ ಇರುವ ಜಿಲ್ಲಾಸ್ಪತ್ರೆಯಲ್ಲಿ 300 ಬೆಡ್‍ಗಳನ್ನು ಕೋವಿಡ್ ಸೋಂಕಿತರ ಆರೈಕೆಗೆ ಮೀಸಲಿಡಲಾಗಿದೆ. ಎಲ್ಲ ಬೆಡ್‍ಗಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 287 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 20 ಸೋಂಕಿತರು ಐಸಿಯುನಲ್ಲಿದ್ದಾರೆ. ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಕೆಲ ಬೆಡ್‍ಗಳನ್ನು ಮೀಸಲಿಟ್ಟಿವೆ. ಆದರೆ, ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳ ಬೆಡ್ ಕೂಡಾ ಫುಲ್ ಆಗಿವೆ.
ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಬೆಡ್‍ಗಳು ಭರ್ತಿ ಆಗುತ್ತಿರುವ ಕಾರಣ ಗಂಭೀರ ಆಕ್ಸಿಜನ್ ಅವಶ್ಯ ಇರುವ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಈ ಕಾರಣಕ್ಕೆ ಜಿಲ್ಲಾಸ್ಪತ್ರೆ ಕೂಡ ಹೌಸ್‍ಫುಲ್ ಆಗುತ್ತಿದೆ. ಜಿಲ್ಲಾಸ್ಪತ್ರೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.
ಆಕ್ಸಿಜನ್ ಇದ್ದರೂ ಸಮಸ್ಯೆ:
ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ 4,146 ಬೆಡ್‍ಗಳನ್ನು ಕಾಯ್ದಿರಿಸಿದೆ. ಇದರಲ್ಲಿ 1909 ಬೆಡ್‍ಗಳು ಆಕ್ಸಿಜನ್ ಸಂಪರ್ಕ ಹೊಂದಿದ್ದು, ಅವೆಲ್ಲವೂ ಭರ್ತಿ ಆಗಿವೆ. ಜಿಲ್ಲೆಯಲ್ಲಿ ಆಕ್ಸಿಜನ್ ಇದ್ದರೂ ಆಕ್ಸಿಜನ್ ಸಂಪರ್ಕ ಇರುವ ಬೆಡ್‍ಗಳ ಅಭಾವ ಸೃಷ್ಟಿಯಾಗಿದೆ. ಜಿಲ್ಲಾಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳು ಕೂಡ ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಹೆಚ್ಚಿಸಬೇಕು. ಇಲ್ಲವಾದರೆ ಆಕ್ಸಿಜನ್ ಇಲ್ಲದೇ ಮೃತಪಡುವವರ ಸಂಖ್ಯೆಯೂ ಹೆಚ್ಚಾಗುವ ಆತಂಕವೂ ಎದುರಾಗಿದೆ.
ಬೆಳಗಾವಿಯಲ್ಲಿ ಕೆಲ ದಿನಗಳ ಹಿಂದೆಯೇ ಆಕ್ಸಿಜನ್ ಉತ್ಪಾದನೆ ಆರಂಭಗೊಂಡಿದೆ. ಹೀಗಾಗಿ ಜಿಲ್ಲೆಯ ಅಗತ್ಯಕ್ಕೂ ಹೆಚ್ಚು ಇಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಜಿಲ್ಲಾಸ್ಪತ್ರೆ ಸೇರಿ ಯಾವ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಆಕ್ಸಿಜನ್ ಕೊರತೆ ಎದುರಾಗಿಲ್ಲ. ಆದರೆ, ಆಕ್ಸಿಜನ್ ಸಂಪರ್ಕ ಇರುವ ಬೆಡ್‍ಗಳ ಅಭಾವ ಎದುರಾಗಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಬೆಳಗಾವಿ ಜಿಲ್ಲೆಗೂ ದೊಡ್ಡ ಕಂಟಕವಾಗಲಿದೆ.
ಹೋಮ್ ಐಸೋಲೇಷನ್ಗೆ ಆದ್ಯತೆ:
ಸದ್ಯ ಜಿಲ್ಲೆಯಲ್ಲಿ ಸದ್ಯ 3,715 ಕೊರೊನಾ ಸಕ್ರಿಯ ಕೇಸ್‍ಗಳಿವೆ. ಆದರೆ, ಎರಡು ಸಾವಿರಕ್ಕೂ ಅಧಿಕ ಜನರಲ್ಲಿ ರೋಗ ಲಕ್ಷಣಗಳಿಲ್ಲ. ಹೀಗಾಗಿ ಈ ಎಲ್ಲರೂ ಆಸ್ಪತ್ರೆಗೆ ದಾಖಲಾಗದೇ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಉಪಚಾರ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಡಳಿತಕ್ಕೆ ದೊಡ್ಡ ಪ್ರಮಾಣದಲ್ಲಿ ಒತ್ತಡ ಎದುರಾಗಿಲ್ಲ. ಅತೀ ಗಂಭೀರ ಸ್ಥಿತಿಯಲ್ಲಿರುವ ಹಾಗೂ ವಯಸ್ಸಾದವರು ಮಾತ್ರ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. 35 ವರ್ಷದೊಳಗಿನ ಬಹುತೇಕರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.