ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಧೋನಿ ನಡೆಸಿರುವ ರೀತಿ ನಿಜಕ್ಕೂ ಶ್ಲಾಘನೀಯ. ಕಳೆದ ವರ್ಷ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಮಾಹಿ ಬಳಗ, ಈ ಸಲ ಫೈನಲ್ನಲ್ಲಿ ರೋಚಕವಾಗಿ ಸೋಲು ಕಂಡಿತು.
ಇದೀಗ ಮುಂದಿನ ವರ್ಷವೂ ತಂಡವನ್ನ ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿರುವ ಧೋನಿ ತಂಡವನ್ನ ಅದ್ಭುತವಾಗಿ ಮುನ್ನಡೆಸುತ್ತಿದ್ದು, ಅವರ ಪ್ರದರ್ಶನ ಕೂಡ ಚೆನ್ನಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ವಿಶ್ವಕಪ್ಗಾಗಿ ಇಂಗ್ಲೆಂಡ್ ಪ್ರವಾಸ ಬೆಳೆಸಲಿರುವ ಧೋನಿ, ಅದಾದ ಬಳಿಕ ನಿಗದಿತ ಓವರ್ಗಳ ಕ್ರಿಕೆಟ್ನಿಂದ ವಿದಾಯ ಪಡೆದುಕೊಳ್ಳಲಿದ್ದಾರೆ ಎಂದು ಕೇಳಿ ಬರುತ್ತಿದೆ.
ಫೈನಲ್ ಮುಗಿದ ಬಳಿಕ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಮಾತನಾಡಿ, ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ಕೆಲವೊಂದು ಬದಲಾವಣೆ ಮಾಡುವ ಸೂಚನೆ ನೀಡಿದ್ದರು. ತಂಡದಲ್ಲಿ ಸದ್ಯ ಬಹುತೇಕ ಹಿರಿಯ ಆಟಗಾರರನ್ನೇ ಹೊಂದಿದ್ದು, ಹೊಸ ಹೊಸ ಪ್ರತಿಭೆ ಸೇರಿಸಿಕೊಳ್ಳುವುದಾಗಿ ಹೇಳಿದ್ದರು.