ಮಂಗಳೂರು : ಎರಡನೇ ಅಲೆಯ ಕೋವಿಡ್ ಕಾಲದಲ್ಲಿ ಎಲ್ಲೆಡೆ ಆಕ್ಸಿಜನ್ ಕೊರತೆಯಿಂದಲೇ ಸಾವು-ನೋವುಗಳು ಸಂಭವಿಸುತ್ತಿವೆ.
ಈ ಸಮಸ್ಯೆಯನ್ನು ಬಗೆಹರಿಸಲು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ರಾಜ್ಯದ 5 ಕಡೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಎಂಆರ್ಪಿಎಲ್ ಮುಂದೆ ಬಂದಿದೆ.
ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶನದಂತೆ ಎಂಆರ್ಪಿಎಲ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಸೇರಿ ರಾಜ್ಯದ ಐದು ಕಡೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಿ ಕೊಡುಗೆಯಾಗಿ ನೀಡಲಿದೆ.
ಆಕ್ಸಿಜನ್ ಪ್ಲಾಂಟ್ ತಯಾರಿಗೆ ಈಗಾಗಲೇ ವೆನ್ಲಾಕ್ ಆಸ್ಪತ್ರೆಯಲ್ಲಿ ಸ್ಥಳ ಗುರುತು ಕಾರ್ಯ ನಡೆದಿದ್ದು, ಪೂರ್ವ ತಯಾರಿಯೂ ನಡೆದಿದೆ. ವೆನ್ಲಾಕ್ನಲ್ಲಿ 1.24 ಕೋಟಿ ರೂ. ವೆಚ್ಚದಲ್ಲಿ ಮೊದಲ ಆಕ್ಸಿಜನ್ ಘಟಕವು ಒಂದೂವರೆ ತಿಂಗಳಲ್ಲಿ ಆರಂಭವಾಗಲಿದೆ.
ಬ್ಲೂಪ್ರಿಂಟ್ ಕೂಡ ತಯಾರಾಗಿದೆ. ಕೊಯಂಬತೂರಿನ ಕಂಪನಿಯೊಂದು ಆಕ್ಸಿಜನ್ ಘಟಕ ನಿರ್ಮಾಣದ ಹೊಣೆ ಹೊತ್ತಿದೆ. ಇದಕ್ಕೆ ಪೂರಕವಾದ ಕಚ್ಚಾ ವಸ್ತುಗಳ ತಯಾರಿಯೂ ನಡೆಯುತ್ತಿದೆ.
ಈ ಆಕ್ಸಿಜನ್ ಘಟಕವು ನಿಮಿಷಕ್ಕೆ 930 ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಅತ್ಯಾಧುನಿಕ ತಂತ್ರಾಜ್ಞಾನದೊಂದಿಗೆ ಕಾರ್ಯಾಚರಿಸಲಿದೆ.
ಈಗ ವೆನ್ಲಾಕ್ ಆಸ್ಪತ್ರೆಗೆ ಬಳ್ಳಾರಿ ಜಿಲ್ಲೆಯಿಂದ ಹಾಗೂ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಿಂದ ಎರಡು ದಿನಕ್ಕೊಮ್ಮೆ 6 ಸಾವಿರ ಲೀಟರ್ ಆಕ್ಸಿಜನ್ ತರಿಸಲಾಗುತ್ತಿದೆ. ಈ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಬಳಿಕ ಯಾವುದೇ ತೊಂದರೆ ಇಲ್ಲದೆ ಆಕ್ಸಿಜನ್ ದೊರಕಲಿದೆ.