ಚಿತ್ರದುರ್ಗ: ಲೋಕಸಭಾ ಸದಸ್ಯರಾದ ಬಳಿಕ ಮೊದಲ ಬಾರಿಗೆ ಎ.ನಾರಾಯಣಸ್ವಾಮಿ, ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಕಾಮಗಾರಿಯಲ್ಲಿ ತಲೆದೂರಿದ ಸಮಸ್ಯೆಗಳ ಬಗ್ಗೆ ಶೀಘ್ರವೇ ಸೂಕ್ತಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಿಸಿ ಅಲ್ಲಿನ ಮಾಹಿತಿ ತಿಳಿದುಕೊಂಡ ಅವರು, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಕಾಮಗಾರಿ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿಯಲ್ಲಿ ಸಭೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಜಲಾಶಯದ ಸುತ್ತಮುತ್ತ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಶಾಂತಿಪುರ ಹಾಗೂ ಲಕ್ಕವಳಿ, ವೆಂಕಟಾಪುರ ಗ್ರಾಮಗಳ ಬಳಿ ನಿರ್ಮಾಣ ಹಂತದಲ್ಲಿರುವ ಪಂಪ್ ಹೌಸ್, ಲಿಫ್ಟ್ ಗಳ ಕಾಮಗಾರಿಗಳನ್ನ ವೀಕ್ಷಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಿವಿ ಸಾಗರಕ್ಕೆ ನೀರು ಹರಿಸುವ ಕಾಮಗಾರಿ, ಅಂಜ್ಜಪುರ ಬಳಿ ಕೊರೆದಿರುವ 7 ಕಿ.ಮೀ ಸುರಂಗ ಮಾರ್ಗ ಕೂಡ ನೋಡಿದರು. 2 ತಿಂಗಳೊಳಗೆ ನೀರು ತರುವುದಾಗಿ ಭರವಸೆ ನೀಡಿದರು. ಭದ್ರಾ ನಾಲೆಗೆ ಅಡ್ಡಿಯಾಗಿರುವ ರೈಲ್ವೆ ಮೇಲ್ಸೇತುವೆಯ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.