ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯಿಂದ ಯಾವುದೇ ಹಾನಿ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಜಿಲ್ಲಾವಾರು ಪರಿಶೀಲನಾ ಸಭೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕೊಡಗು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಮಳೆಯು ಸಾರ್ವಜನಿಕ ಆಸ್ತಿ ಹಾನಿ ಜತೆಗೆ ಸಾಕಷ್ಟು ಅನಾಹುತಗಳನ್ನು ತಂದೊಡ್ಡಿತ್ತು. ಅದಕ್ಕಾಗಿ ಮೊದಲ ಬಾರಿಗೆ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಅನಾಹುತ ತಡೆಯುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ.
ಹವಾಮಾನ ತಜ್ಞರು ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿ ಮುಂಗಾರು ಮಳೆಯಿಂದ ಉಂಟಾಗುವ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಕುರಿತು ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಮೂರು ತಿಂಗಳ ಕಾಲ ಎನ್‍ಡಿಆರ್‍ಎಫ್ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಲಿದೆ. ಒಂದು ವೇಳೆ ಭಾರೀ ಮಳೆ ಉಂಟಾಗಿ ನೈಸರ್ಗಿಕ ವಿಕೋಪ ಸಂಭವಿಸಿದಾಗ ಈ ತಂಡ ತಕ್ಷಣ ಜನರ ನೆರವಿಗೆ ತೆರಳಲಿದೆ ಎಂದು ಮೂಲಗಳು ಹೇಳಿವೆ.
ಈ ಬಾರಿ ನೈರುತ್ಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಲಿದೆ ಎಂಬ ಮುನ್ಸೂಚನೆ ಇದೆ. ಕೊಡಗಿನಲ್ಲೂ ಕೂಡ ಮಳೆ ಕೊರತೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅಲ್ಲದೆ, ವಾಡಿಕೆಯಂತೆ ಮುಂಗಾರು ಮಳೆ ಆಗಮನವಾಗುವ ಸಾಧ್ಯತೆಗಳು ವಿರಳವಾಗಿದೆ. ಆದರೆ, ಎಷ್ಟು ದಿನ ವಿಳಂಬವಾಗಲಿದೆ ಎಂಬುದು ನಿಖರವಾಗಿ ಇದುವರೆಗೂ ತಿಳಿದುಬಂದಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಶನಿವಾರ ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿ ಮಳೆಯಾಗಿದೆ. ಇನ್ನೂ ಮೂರು ದಿನಗಳ ಕಾಲ ಇದೇ ರೀತಿ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆಗಳು ಇವೆ ಎಂದು ಹೇಳಿದ್ದಾರೆ.