ಮಂಗಳೂರು: ಸರ್ಕಾರ ಲಸಿಕೆಯ ವಿಜ್ಞಾನ, ಲಾಜಿಕ್ ಮಾತನಾಡುವುದು ಬಿಟ್ಟು ರಾಜಕೀಯ ಮಾತನಾಡುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳಿಗೆ ನನ್ನ ಕಳಕಳಿಯ ವಿನಂತಿಯೇನೆಂದರೆ ಲಸಿಕೆಯ ಬಗ್ಗೆ ರಾಜಕೀಯ ಮಾಡುವುದು ನಿಲ್ಲಿಸಿ, ಲಸಿಕೆಯ ವಿಜ್ಞಾನ, ಲಾಜಿಕ್ ಬಗ್ಗೆ ಮಾತನಾಡಿ ಎಂದು ಶಾಸಕ ಯು.ಟಿ.ಖಾದರ್ ಸಲಹೆ ನೀಡಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಲಸಿಕೆಯ ಬಗ್ಗೆ ರಾಜಕೀಯ ಮಾತನಾಡಿ ಕಾಂಗ್ರೆಸ್ನವರು ದಾರಿ ತಪ್ಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಲಸಿಕೆಯ ಬಗ್ಗೆ ನಾನು ತಪ್ಪು ಅಭಿಪ್ರಾಯ ಬರುವ ಒಂದು ಹೇಳಿಕೆ ನೀಡಿರುವುದನ್ನು ಇವರು ಸಾಬೀತುಪಡಿಸಿದಲ್ಲಿ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಹೇಳಿದರು.
ಜನರ ದಿಕ್ಕು ತಪ್ಪಿಸಲು ಬಿಜೆಪಿಗರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜನರಿಗೆ ಲಸಿಕೆ ಕೊಡಲು ಸಾಧ್ಯವಾಗಿಲ್ಲ. ಖಾಸಗಿಯವರಿಗೆ ಲಸಿಕೆ ದೊರಕಿದರೂ ಸರ್ಕಾರದವರಿಗೆ ದೊರಕುತ್ತಿಲ್ಲ. ದೇಶದಲ್ಲಿ ದಿವಸಕ್ಕೆ ಎಷ್ಟು ಲಸಿಕೆ ತಯಾರಾಗುತ್ತಿದೆ. ಈ ಲಸಿಕೆಯಲ್ಲಿ ಯಾರಿಗೆ ಎಷ್ಟೆಷ್ಟು ಸರಬರಾಜು ಆಗುತ್ತದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಲಿ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರದ್ದು ಮಾಡುವ ಸರ್ಕಾರಗಳಾಗಿದ್ದು, ಶೈಕ್ಷಣಿಕ ವಿಚಾರದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಶಿಕ್ಷಣದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದ ನಿಲುವು ಇಲ್ಲ. ಈ ಮೂಲಕ ರಾಜ್ಯ ಸರ್ಕಾರ ಶಿಕ್ಷಕರನ್ನು ಭಿಕ್ಷುಕರನ್ನಾಗಿ ಮಾಡುತ್ತಿದೆ. ಶಿಕ್ಷಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಭಾರತ ಐಟಿಯಲ್ಲಿ ಸಾಕಷ್ಟು ಮುಂದೆ ಇದೆ. ಈ ಕಾಲಘಟ್ಟದಲ್ಲಿ ಪರೀಕ್ಷೆ ಮಾಡಲು ತಾಂತ್ರಿಕ ವಿಧಾನವನ್ನು ಅನುಸರಿಸಬಹುದಲ್ಲವೇ, ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಎಂದು ಹೇಳಿದರು.