ಬೆಂಗಳೂರು: ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ತಮಿಳುನಾಡಿಗೆ ಪತ್ರ ಬರೆದಿದ್ದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ ಬೆನ್ನಲ್ಲೇ ತಮಿಳುನಾಡು ರಾಜ್ಯದಲ್ಲಿ ನೂತನ ಸರ್ಕಾರವು ಅಸ್ತಿತ್ವಕ್ಕೆ ಬಂದ ಹಿನ್ನಲೆ ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ಸಲುವಾಗಿ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆಯಲಾಗಿತ್ತು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಹಾಗೂ ಸದರಿ ಯೋಜನೆಯ ನಿರ್ಮಾಣದಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುವ ಅಂಶಗಳನ್ನು ತಿಳಿಯಪಡಿಸಲಾಗಿತ್ತು.ಆದ,ರೆ ತಮಿಳುನಾಡು ಸರ್ಕಾರವು ಈ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಈ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂದು ವ್ಯಾಖ್ಯಾನಿಸಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ನೆರೆ ರಾಜ್ಯದ ಜೊತೆಗಿನ ಪತ್ರ ವ್ಯವಹಾರದ ಕುರಿತು ಸಿಎಂ ಕಚೇರಿ ಸಮಜಾಯಿಷಿ ನೀಡಿದೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರನ್ನು ಸರ್ವೋಚ ನ್ಯಾಯಾಲಯವು ಆದೇಶಿಸಿದ್ದು, ಸದರಿ ಪ್ರಮಾಣವು ಕನ್ಸಂಪ್ಟಿವ್ ಬಳಕೆಯಾಗಿದ್ದು, ಈ ಪ್ರಮಾಣವನ್ನು ಉಪಯೋಗಿಸಿಕೊಳ್ಳಲು 23.75 ಟಿಎಂಸಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗಿರುತ್ತದೆ. ಆದರೆ, ತಮಿಳುನಾಡು ರಾಜ್ಯಕ್ಕೆ ಸದರಿ ಯೋಜನೆಯಿಂದ ಯಾವುದೇ ತೊಂದರೆಯಾಗವುದಿಲ್ಲ, ವಾಸ್ತವಿಕವಾಗಿ ನೀರಿನ ಹರಿವಿನಲ್ಲಿ ಅನುಕೂಲವಾಗುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯ ಕಾರಣಗಳಿಗೆ ವಿರೋಧಿಸುತ್ತಿದೆ ಎಂದು ದೂರಿದೆ.
ಈ ಕುರಿತು 2018ರಲ್ಲಿ ತಮಿಳುನಾಡು ರಾಜ್ಯವು ದಾವೆಯನ್ನು (ಮಿಸಲೇನಿಯಸ್ ಅಪ್ಲಿಕೇಷನ್) ಸಲ್ಲಿಸಿದೆ. ಆದರೆ, ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಅಡೆತಡೆ ಇರುವುದಿಲ್ಲ. ಯೋಜನೆಯನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಲು ಅಗತ್ಯವಿರುವ ತೀರುವಳಿಗಳನ್ನು ಪಡೆಯಲು ಕ್ರಮಕೈಗೊಳ್ಳಲಾಗಿದ್ದು, ಶೀಘ್ರುವಾಗಿ ತೀರುವಳಿಗಳನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಕಚೇರಿ ಸ್ಪಷ್ಟೀಕರಣ ನೀಡಿದೆ.