ಮಂಡ್ಯ : ಬಾರ್ ಲೈಸೆನ್ಸ್ಗೆ 20 ಲಕ್ಷ ರೂ ಲಂಚದ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆ ಅಬಕಾರಿ ಡಿಸಿ ವಿರುದ್ದ ಲೋಕಾಯುಕ್ತಕ್ಕೆ ದೂರು ಕೊಟ್ಟಿರುವ ಘಟನೆ ಜಿಲ್ಲೆಯಿಂದ ವರದಿಯಾಗಿದೆ.
ಇನ್ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತಕ್ಕೆ ದೂರು: ಮದ್ದೂರು ತಾಲೂಕು ಚಂದೂಪುರ ಗ್ರಾಮದಲ್ಲಿ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್ಗೆ ಅನುಮತಿ ಪಡೆಯಲು ತಮ್ಮ ತಾಯಿ ಲಕ್ಷ್ಮಮ್ಮರ ಹೆಸರಿನಲ್ಲಿ ಪುನೀತ್ ಎಂಬುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಅಬಕಾರಿ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಅನಂತರ ಖುದ್ದಾಗಿ ಇಲಾಖೆಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಿದಾಗ ಈ ವೇಳೆ ನಲವತ್ತು ಲಕ್ಷ ರೂ. ಲಂಚ ನೀಡಲು ಅಧಿಕಾರಿಗಳು ಬೇಡಿಕೆ ಇಟ್ಟಿದ್ದು, ಕೊನೆಗೆ 20 ಲಕ್ಷವನ್ನಾದರೂ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಪುನೀತ್ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಇನ್ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈ ಬಗ್ಗೆ ದೂರುದಾರ ಪುನೀತ್ ಮಾತನಾಡಿ, ''ನಾನು ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್ಗೆ 5 ಬಾರಿ ಅರ್ಜಿ ಸಲ್ಲಿಸಿದ್ದೆ. 4 ಬಾರಿ ರಿಜೆಕ್ಟ್ ಮಾಡಿದ್ದಾರೆ. ಮೊದಲ ಬಾರಿ ಅಪ್ಲಿಕೇಷನ್ ಹಾಕಿದಾಗ ಆನ್ಲೈನ್ನಲ್ಲಿ ಏಕೆ ಹಾಕಿದ್ದೀರಿ?. ನಮ್ಮ ಗಮನಕ್ಕೆ ತಂದು ಹಾಕಬೇಕು. ಹೀಗೆ ಏಕಾಏಕಿ ಹಾಕಿರುವುದು ಸರಿಯೇ? ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿದ್ದರು. ನಂತರ ಡಿಸಿ ಅವರನ್ನ ಭೇಟಿಯಾಗಿ ಅಂತಾರೆ, ಅವರನ್ನ ಭೇಟಿಯಾದರೆ ಏನಿದೆ ಮಾಮೂಲಿ ಅದನ್ನ ಸೆಟ್ಲಮೆಂಟ್ ಮಾಡಿ ಅಂತಾರೆ. ನಾನು ಏನನ್ನೂ ಕೊಟ್ಟಿಲ್ಲ. ನಂತರ ಅಪ್ಲಿಕೇಷನ್ ರಿಜೆಕ್ಟ್ ಮಾಡಿದ್ರು'' ಎಂದರು.
ಲೋಕಾಯುಕ್ತ ಅಧಿಕಾರಿಗಳಿಗೆ ದೂರು : ''ಮತ್ತೆ ಅಪ್ಲಿಕೇಷನ್ ಹಾಕಿ ನಾನು ಡಿಸಿಯವರನ್ನ ಭೇಟಿ ಮಾಡಿದೆ. ಅಲ್ಲೂ ಅದೇ ಕತೆ, ಅವರ ಡಿಮಾಂಡ್ಗೆ ಕ್ಕೆ ಒಪ್ಪದಿದ್ದಾಗ ನನ್ನ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಇದೀಗ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ದೂರುದಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಲಂಚಕ್ಕೆ ಬೇಡಿಕೆ ಇಟ್ಟ ಆರೋಪ; ಲೋಕಾಯುಕ್ತ ಬಲೆಗೆ ಬಿದ್ದ ಬುಡಾ ಆಯುಕ್ತ, ಸಿಬ್ಬಂದಿ