ಹುಬ್ಬಳ್ಳಿ: ಚಿಕಿತ್ಸೆಗಾಗಿ ಹಳ್ಳಿಯಿಂದ ಹುಬ್ಬಳ್ಳಿಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಊರಿಗೆ ಹೋಗಲಾರದೇ ನರಳಿ ನರಳಿ ಪುಟ್ಪಾತ್ ಮೇಲೆಯೇ ಪ್ರಾಣ ಕಳೆದುಕೊಂಡ ಘಟನೆ ಹುಬ್ಬಳ್ಳಿಯ ಹಳೇಯ ಬಸ್ ನಿಲ್ದಾಣದ ಎದುರು ನಡೆದಿದೆ.
ಹೌದು, ತನ್ನ ಅನಾರೋಗ್ಯದ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೊಬ್ಬ ಪುಟ್ಪಾತ್ ಮೇಲೆ ಬಿದ್ದು ಪ್ರಾಣವನ್ನು ಕಳೆದುಕೊಂಡಿದ್ದಾನೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮುಳಗುಂದ ಪಟ್ಟಣದ ಕಲಂದರಸಾಬ ಸಯ್ಯದ ಬಾಳೆ ಎಂಬ ವ್ಯಕ್ತಿಯೇ ಸಾವಿಗೀಡಾದ ದುರ್ದೈವಿ. ಆಸ್ಪತ್ರೆಯಲ್ಲಿ ತೋರಿಸಿಕೊಂಡ ನಂತರ ತೆಗೆದುಕೊಂಡ ಔಷಧಗಳು ಚೀಲದಲ್ಲಿ ಪತ್ತೆಯಾಗಿವೆ.
ಹಳೇ ಬಸ್ ನಿಲ್ದಾಣ, ರೇಣುಕಾ ರೆಸ್ಟೊರೆಂಟ್ ಮುಂಭಾಗವೇ ಬಿದ್ದಿರುವ ಕಲಂದರಸಾಬ್ ಅಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾರೆ. ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತ ವ್ಯಕ್ತಿಯ ಗುರುತಿನ ಚೀಟಿ ಸೇರಿದಂತೆ ಹಲವು ವಸ್ತು, ಹಣವನ್ನು ಚೀಲದಲ್ಲಿ ಹಾಕಿಟ್ಟು, ಶವವನ್ನು ಕಿಮ್ಸನ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.