ಚಾಮರಾಜನಗರ: ಎತ್ತಿನ ಬಂಡಿ ಓಡಿಸುವ ರೈತನನ್ನು ನೋಡಿದ್ದೀರಿ. ಬೈಕ್-ಟ್ರ್ಯಾಕ್ಟರ್ ಚಲಾಯಿಸುವ ಅನ್ನದಾತರನ್ನು ಕಂಡಿದ್ದೀರಿ. ಆದರೆ ಇಲ್ಲೊಬ್ಬ ರೈತ ರೇಸ್ ಕುದುರೆಯನ್ನು ಹತ್ತಿ ಸವಾರಿ ಮಾಡ್ತಿದ್ದಾನೆ. ಇವರಿಗೆ ಲಾಕ್ಡೌನ್ ವರದಾನವಾಗಿದೆಯಂತೆ.
ಯಳಂದೂರು ತಾಲೂಕಿನ ಕಂದಹಳ್ಳಿಯ ಬಸವರಾಜನಾಯಕ ಎಂಬವರು ಮಾಮೂಲಿಯಂತೆ ಬೈಕ್, ಬಸ್ನಲ್ಲಿ ಹೋಗದೇ ಕುದುರೆ ಹತ್ತಿ ಇತರೆ ವಾಹನಗಳನ್ನು ಓವರ್ ಟೇಕ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಯಾರ ಮಾರ್ಗದರ್ಶನವೂ ಇಲ್ಲದೆ ಕುದುರೆ ಸವಾರಿ ಕಲಿತಿದ್ದು, ಈ ಲಾಕ್ಡೌನ್ ಈಗ ಮತ್ತಷ್ಟು ಇವರಿಗೆ ವರವಾಗಿದೆಯಂತೆ.
ತೆಂಗಿನಕಾಯಿ ವ್ಯಾಪಾರವೂ ಅಷ್ಟೇನೂ ಇಲ್ಲವಾದ್ದರಿಂದ ಮನೆಯಲ್ಲೇ ಇರುತ್ತಿದ್ದ ಬಸವರಾಜ್ ಕುದುರೆ ಹತ್ತಿ ಜಮೀನಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ. ಕುದುರೆಗೆ ನಿಯಮಿತ ವ್ಯಾಯಾಮ, ಓಟ ಅಗತ್ಯವಿದ್ದು, ಕುದುರೆಯ ಪಾಲನೆ- ಸವಾರಿಗೆ ಲಾಕ್ಡೌನ್ ಸಹಕಾರಿಯಾಗಿದೆ.
ಕಳೆದ ಕೆಲವು ದಿನಗಳಿಂದ ನಿತ್ಯ ಕುದುರೆಗೆ ಮಾಲಿಷ್ ಮಾಡುವುದು, ಕುದುರೆಗೆ ಇಷ್ಟವಾದ ಆಹಾರ ಕೊಡುವುದು, ಹುಲ್ಲು ಮೇಯಿಸಲು ಕರೆದೊಯ್ಯುವುದು ಮಾಡುತ್ತಿದ್ದು, ಇವರೇ ಕುದುರೆಗೆ ಲಾಳ ಕಟ್ಟಿ ಅದರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.
ಬೆಳಗ್ಗೆ 10ರೊಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟಿರುವುದರಿಂದ ಕುದುರೆ ಹತ್ತಿ ದೂರದ ಯಳಂದೂರು, ಸಂತೇಮರಹಳ್ಳಿಗೆ ತೆರಳಿ ವಸ್ತುಗಳನ್ನು ಖರೀದಿಸಿ ಬರುವ ಇವರು ಖಾಲಿ ರಸ್ತೆಯಲ್ಲಿ ಕುದುರೆ ಸವಾರಿ ಮಾಡಿಕೊಂಡು ಜಮೀನಿಗೆ ಹೋಗುವ ಮೂಲಕ ಜಾಲಿ ಲೈಫ್ ಕಂಡುಕೊಂಡಿದ್ದಾರೆ.
ಈ ಅಶ್ವವು ಹೈ ರೇಸರ್ ಎಂಬ ಹೆಸರಿನಲ್ಲಿ ಮೈಸೂರು ರೇಸ್ನಲ್ಲಿ ಗೆದ್ದಿದೆ. ಅಣ್ಣನ ಮಗ ತಂದ ರೇಸ್ ಕುದುರೆಯ ಪೋಷಣೆಯಲ್ಲಿ ತೊಡಗಿ ತಾನೇ ಸವಾರಿ ಕಲಿತು ಈಗ ಯಾವ ಜಾಕಿಗೂ ಕಮ್ಮಿ ಇಲ್ಲದಂತೆ ಕುದುರೆ ಓಡಿಸುತ್ತಾರೆ ಬಸವರಾಜನಾಯಕ.