ನವದೆಹಲಿ: ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಸಂಪರ್ಕ ಕಡಿತಗೊಂಡ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಮೂರು ದಿನ ಕಳೆದರೂ ಪತ್ತೆಯಾಗಿಲ್ಲ. ಇಂತಹುದೇ ಎಎನ್-32 ವಿಮಾನ ನಾಪತ್ತೆ ಘಟನೆ ಈ ಮೊದಲು ನಡೆದಿತ್ತು.
ಅದು 2016ರ ಜುಲೈ 22. ಎಎನ್-32 ವಿಮಾನ ಚೆನ್ನೈನ ತಾಂಬರಂ ವಾಯುನೆಲೆಯಿಂದ ಬೆಳಗ್ಗೆ ಎಂಟು ಗಂಟೆಗೆ ಟೇಕಾಫ್ ಆಗಿತ್ತು. 29 ಪ್ರಯಾಣಿಕರು ಈ ವಿಮಾನದಲ್ಲಿ ಅಂಡಮಾನ್ ಹಾಗೂ ನಿಕೋಬಾರ್ನ ಪೋರ್ಟ್ ಬ್ಲೇರ್ಗೆ ಹೊರಟಿದ್ದರು.
ಬಂಗಾಳ ಕೊಲ್ಲಿ ತಲುಪುವ ವೇಳೆಗೆ ಈ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ತಕ್ಷಣವೇ ವಾಯುಸೇನೆ ಅತಿದೊಡ್ಡ ಕಾರ್ಯಾಚರಣೆಗೆ ಇಳಿದಿತ್ತು. ಪ್ರಯಾಣಿಕರ ರಕ್ಷಣೆಯ ನಿಟ್ಟಿನಲ್ಲಿ ಹುಡುಕಾಟವನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗಿತ್ತು.
ಎಎನ್-32 ಮಿಸ್ಸಿಂಗ್.. ರಾತ್ರಿಯಿಡೀ ಹುಡುಕಾಟ, ಇಸ್ರೋ ಭಾಗಿ... ವಿಮಾನದ ಸುಳಿವು ಇನ್ನೂ ನಿಗೂಢ!
ನಾಪತ್ತೆಯಾದ ಎಎನ್-32 ಹುಡುಕಾಟದಲ್ಲಿ ವಾಯುಸೇನೆಯ ಜೊತೆಗೆ ನಾಲ್ಕು ಹಡಗುಗಳು ಹಾಗೂ ಒಂದು ಸಬ್ಮೆರಿನ್ ಮೂಲಕ ನೌಕಾಸೇನೆಯೂ ಶಕ್ತಿಮೀರಿ ಪ್ರಯತ್ನಿಸಿತ್ತು.
ಮೂರನೇ ದಿನದಲ್ಲಿ ಇಪ್ಪತ್ತು ನೌಕಾಸೇನೆಯ ಹಡಗುಗಳು, ಕರಾವಳಿ ಪಡೆಯ ಹಡಗು ಹಾಗೂ ಎಂಟು ಹೆಲಿಕಾಪ್ಟರ್ಗಳ ಮೂಲಕ ಭಾರಿ ಹುಡುಕಾಟ ನಡೆಸಲಾಯಿತು. ಇಷ್ಟಾದರೂ ವಿಮಾನದ ಸುಳಿವೂ ಸಿಗದಿದ್ದಾಗ ವಾಯುಸೇನೆ ಅಂತಾರಾಷ್ಟ್ರೀಯ ಸಹಾಯವನ್ನೂ ಯಾಚಿಸಿತು. ಸ್ಯಾಟಲೈಟ್ ಫೋಟೋಗಳ ಮೂಲಕ ಸುಳಿವಿಗಾಗಿ ಅಮೆರಿಕದ ಮೊರೆ ಹೋಗಲಾಯಿತು.
ಸುಮಾರು ನೂರು ದಿನಗಳ ಸತತ ಹುಡುಕಾಟದ ಬಳಿಕವೂ ವಿಮಾನದ ಕುರಿತಾಗಿ ಸಣ್ಣ ಸುಳಿವೂ ಸಿಗದಿದ್ದಾಗ ವಾಯುಸೇನೆ ಹುಡುಕಾಟವನ್ನು ಅಧಿಕೃತವಾಗಿ ನಿಲ್ಲಿಸುವ ನಿರ್ಧಾರಕ್ಕೆ ಬಂತು. ಹುಡುಕಾಟದಲ್ಲಿ ನಾವು ಸೋತಿದ್ದೇವೆ, ಎಲ್ಲ ಪ್ರಯಾಣಿಕರೂ ಸಾವನ್ನಪ್ಪಿರುವ ಸಾಧ್ಯತೆಯ ಹೊರತಾಗಿ ಇನ್ನು ನಮ್ಮ ಬಳಿ ಯಾವುದೇ ದಾರಿ ಉಳಿದಿಲ್ಲ ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 29 ಮಂದಿಯ ಕುಟುಂಬಕ್ಕೂ ವಾಯುಸೇನೆ ಪತ್ರ ಬರೆಯಿತು.
ಹೀಗೆ ಬರೆಯಲಾದ ಪತ್ರದಲ್ಲಿ ಅತಿದೊಡ್ಡ ಹುಡುಕಾಟ ಹಾಗೂ ಶ್ರಮವನ್ನು ಆ ಎಲ್ಲ ಕುಟುಂಬಸ್ಥರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ವಾಯುಸೇನೆ ಮಾಡಿತು.