ಸೂರತ್(ಗುಜರಾತ್): ಇಲ್ಲಿನ ಕೋಚಿಂಗ್ ಸೆಂಟರ್ಗೆ ಏಕಾಏಕಿ ಬೆಂಕಿ ತಗುಲಿ ಸುಮಾರು 20 ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ನಡೆದಿತ್ತು. ಈ ದುರಂತದ ಮಧ್ಯೆ ಯುವಕನೋರ್ವ ಬೆಂಕಿ ಕೆನ್ನಾಲಿಗೆ ಮಧ್ಯೆ ನುಗ್ಗಿ, ಅಪೂರ್ವ ಧೈರ್ಯ ಪ್ರದರ್ಶಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕು ಬೆಳಗಿಸಿದ್ದಾನೆ.
ಕಟ್ಟಡಕ್ಕೆ ಬೆಂಕಿ ತಾಗುತ್ತಿದ್ದಂತೆ ಕೆಲವರು ಆ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವುದರಲ್ಲೇ ಮಗ್ನರಾಗಿದ್ದರು. ಇದರ ಮಧ್ಯೆ ಕೇತನ್ ಜೊರಾವಾಡಿಯಾ ಎಂಬ ಯುವಕ ಜೀವದ ಹಂಗು ತೊರೆದು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಟ್ಟಡದೊಳಗೆ ನುಗ್ಗಿ 10 ವಿದ್ಯಾರ್ಥಿಗಳ ಪ್ರಾಣ ರಕ್ಷಣೆ ಮಾಡಿದ್ದಾನೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದ್ದು, ವಿದ್ಯಾರ್ಥಿನಿಯೊಬ್ಬಳು ರಕ್ಷಣೆಗಾಗಿ ಕಟ್ಟಡದಿಂದ ಜಿಗಿಯುತ್ತಿದ್ದ ದೃಶ್ಯ ನೋಡಿ ಅಯ್ಯೋ ಪಾಪ ಅನಿಸಿತು. ಈ ವೇಳೆ ನಾನು ತಕ್ಷಣ ಏಣಿ ತೆಗೆದುಕೊಂಡು ಮೇಲೆ ಹೋಗಿ ಅಲ್ಲಿಂದ 8 ರಿಂದ 10 ಮಕ್ಕಳನ್ನು ಕೆಳಗೆ ಕರೆದುಕೊಂಡು ಬಂದೆ. ತದನಂತರ ಮತ್ತೆರಡು ವಿದ್ಯಾರ್ಥಿಗಳನ್ನ ಕೆಳಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದಾರೆ.
ಈ ಯುವಕನ ಅದ್ಭುತ ಸಾಹಸ, ಅಪೂರ್ವ ಧೈರ್ಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.