ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸಿ ಮೂರನೇ ತಂಡವಾಗಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇ ಆಫ್ಗೆ ಕಾಲಿಟ್ಟಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ನಂತರದಲ್ಲಿ ಈ ಹಂತಕ್ಕೇರಿತ್ತು. ಸದ್ಯ ನಾಲ್ಕನೇ ಸ್ಥಾನಕ್ಕೆ ನಾಲ್ಕು ತಂಡಗಳು ಸೆಣಸಾಟ ನಡೆಸಲಿವೆ.
ಪಾಯಿಂಟ್ ಪಟ್ಟಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ 12 ಅಂಕ, ರಾಜಸ್ಥಾನ ರಾಯಲ್ಸ್ 11 ಅಂಕ, ಕೋಲ್ಕತ್ತಾ ನೈಟ್ರೈಡರ್ಸ್ 10 ಅಂಕ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 10 ಅಂಕಗಳನ್ನು ಹೊಂದಿದ್ದು ಪ್ಲೇ ಆಫ್ ಆಸೆಯನ್ನು ಈ ನಾಲ್ಕೂ ತಂಡಗಳು ಹೊಂದಿವೆ.
ಸನ್ರೈಸರ್ಸ್ ಹೈದರಾಬಾದ್:
ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ ಮುಗ್ಗರಿಸಿದ್ದರೂ ಪ್ಲೇ ಆಫ್ ಸಾಧ್ಯತೆಯನ್ನು ಉಳಿಸಿಕೊಂಡಿದೆ. ಶನಿವಾರ ಆರ್ಸಿಬಿ ವಿರುದ್ಧ ಹೈದರಾಬಾದ್ ಆಡಲಿದ್ದು ಈ ಪಂದ್ಯ ನಿರ್ಣಾಯಕವಾಗಿರಲಿದೆ.
ಶನಿವಾರದ ಮ್ಯಾಚ್‌ನಲ್ಲಿ ಒಂದ್ವೇಳೆ ಹೈದರಾಬಾದ್ ಸೋತಲ್ಲಿ ನೆಟ್ ರನ್ರೇಟ್ ಲೆಕ್ಕಾಚಾರದಲ್ಲಿ ಪ್ಲೇ ಆಫ್ ಹಾದಿ ನಿರ್ಧಾರವಾಗಲಿದೆ. ಇನ್ನು, ಆರ್ಸಿಬಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಕೋಲ್ಕತ್ತಾ ನೈಟ್ರೈಡರ್ಸ್:
ಕೆಕೆಆರ್ ತಂಡಕ್ಕೆ ಇನ್ನೆರಡು ಪಂದ್ಯಗಳಿದ್ದು ಎರಡನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಕೆಕೆಆರ್ ಇಂದು ಕಿಂಗ್ಸ್ ಇವೆಲೆನ್ ಪಂಜಾಬ್, ಭಾನುವಾರದಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ಈಗಾಗಲೇ ಪ್ಲೇ ಆಫ್ ಅರ್ಹತೆ ಗಿಟ್ಟಿಸಿಕೊಂಡಿರುವುದು ಕೆಕೆಆರ್ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಪಂಜಾಬ್ ತಂಡ ಇನ್ನೂ ಪ್ಲೇ ಆಫ್ ಹಾದಿಯಲ್ಲಿದ್ದು, ಕೆಕೆಆರ್ ವಿರುದ್ದದ ಪಂದ್ಯ ಗೆಲ್ಲಲೇಬೇಕಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್:
ಪಂಜಾಬ್ ತಂಡ ಇನ್ನೆರಡು ಪಂದ್ಯವನ್ನಾಡಲಿದ್ದು ಅವೆರಡೂ ನಿರ್ಣಾಯಕವಾಗಿರಲಿದೆ. ಇಂದು ಕೆಕೆಆರ್, ಭಾನುವಾರದಂದು ಸಿಎಸ್ಕೆ ವಿರುದ್ದ ಪಂಜಾಬ್ ಆಡಲಿದೆ. ಸಿಎಸ್ಕೆ ಕ್ವಾಲಿಫೈ ಆಗಿರುವುದರಿಂದ ಪಂಜಾಬ್ ವಿರುದ್ಧದ ಪಂದ್ಯ ಸಿಎಸ್ಕೆ ಪಾಲಿಗೆ ಅಷ್ಟೇನು ಮಹತ್ವವಿಲ್ಲ. ಆದರೆ, ಕೆಕೆಆರ್ ಹಾಗೂ ಪಂಜಾಬ್ ತಂಡದ ಇಂದಿನ ಸೆಣಸಾಟ ಎರಡೂ ತಂಡಕ್ಕೆ ನಿರ್ಣಾಯಕವಾಗಲಿದೆ.
ರಾಜಸ್ಥಾನ ರಾಯಲ್ಸ್:
ರಾಜಸ್ಥಾನ ತಂಡಕ್ಕೆ ಕೊನೆಯ ಪಂದ್ಯ ಉಳಿದಿದ್ದು ಈಗಾಗಲೇ ಪ್ಲೇ ಆಫ್ಗೆ ಅರ್ಹತೆ ಗಿಟ್ಟಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಶನಿವಾರ ನಡೆಯುವ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದೆ.
ಡೆಲ್ಲಿ ವಿರುದ್ಧ ಜಯಗಳಿಸಿದರೂ ರಾಜಸ್ಥಾನದ ಪ್ಲೇ ಆಫ್ ಹಾದಿ ಸುಗಮವಾಗುವುದಿಲ್ಲ. ಅತ್ತ ಹೈದರಾಬಾದ್ ತಂಡ ಎರಡೂ ಪಂದ್ಯ ಸೋಲಬೇಕು ಹಾಗೂ ಕೆಕೆಆರ್ ಮತ್ತು ಪಂಜಾಬ್ ತಂಡಗಳು ಕೊನೆಯ ಎರಡು ಪಂದ್ಯದಲ್ಲಿ ಒಂದನ್ನು ಸೋಲಬೇಕು. ಇವೆಲ್ಲಾ 'ಲೆಕ್ಕಾಚಾರ'ಗಳು ಸಾಧ್ಯವಾದಲ್ಲಿ ಮಾತ್ರ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ಗೆ ಟಿಕೆಟ್ ಪಡೆದುಕೊಳ್ಳಲಿದೆ.