ವಿಜಯಪುರ: ಆಶಾ ಕಾರ್ಯಕರ್ತೆಯರ ಜೊತೆ ಕಳೆದ ಒಂದು ವಾರದಿಂದ ವರ್ಚ್ಯುಯಲ್ ಸಭೆ ನಡೆಸುತ್ತಿದ್ದೇನೆ. ಅವರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡುತ್ತಿರುವ ಕಾರಣ ಅವರಿಗೆ ಕೊರೊನಾ ಸೊಂಕು ಹರಡದಂತೆ ಅವರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಹ ಸಭೆ ಕರೆದಿದ್ದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲ ರೀತಿ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಇದೇ ವೇಳೆ, ಎರಡು ತಿಂಗಳ ಸಂಬಳ ದೊರೆಯದ ಕಾರಣ ಆಶಾ ಕಾರ್ಯಕರ್ತೆಯರು ಆನ್ಲೈನ್ ಮೂಲಕ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವೆ, ಗುರುವಾರ ಸಚಿವ ಸಂಪುಟ ಸಭೆ ಇದ್ದು, ಸಿಎಂ ಬಳಿ ಚರ್ಚೆ ನಡೆಸಿ ಸಂಬಳ ಕೊಡಿಸುವುದಾಗಿ ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಸೊಂಕು ತಗುಲಿದರೆ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಸೋಂಕಿನಿಂದ ಆಶಾ ಇಲ್ಲವೇ ಅಂಗನವಾಡಿ ಕಾರ್ಯಕರ್ತೆಯರು ಮೃತ ಪಟ್ಟರೆ ವಿಮೆ ಸೌಲಭ್ಯ ದೊರಕಿಸಲು ಸಿಎಂಗೆ ಪತ್ರ ಬರೆಯುವುದಾಗಿ ತಿಳಿಸಿದರು.