ನವದೆಹಲಿ: ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಪ್ರಥಮ ಸುದ್ದಿಗೋಷ್ಠಿಯ ಮೇಲೆ ಬಹಳಷ್ಟು ಜನರ ಕಣ್ಣಿತ್ತು. ಪತ್ರಕರ್ತರ ಪ್ರಶ್ನೆಗೆ ಮೋದಿ ಏನು ಉತ್ತರಿಸುತ್ತಾರೆ. ಏನಾದ್ರೂ ಎಡವಟ್ಟು ಮಾಡಿಕೊಳ್ಳುತ್ತಾರಾ ಎನ್ನುವ ಕುತೂಹಲ ಇತ್ತು. ಆದ್ರೆ, ಪ್ರಧಾನಿ ಮಾತ್ರ ಸನ್ನಿವೇಶವನ್ನು ಮೆಲ್ಲಗೆ ತಳ್ಳಿ ಜಾಣತನ ಪ್ರದರ್ಶಿಸಿದರು.
ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮೋದಿ, ಅಮಿತ್ ಶಾ ಇಬ್ಬರೂ ಇದ್ದರು. ಆದರೆ, ಈ ಸುದ್ದಿಗೋಷ್ಠಿ ಮೋದಿ ಅವರ ಮಾತು ಮತದಾರರಿಗೆ ಧನ್ಯವಾದ ಹೇಳಲಷ್ಟೆ ಸೀಮಿತವಾಗಿತ್ತು. ಸ್ಕ್ರೀಸ್ನಲ್ಲಿ ಅಮಿತ್ ಶಾ ಅವರೇ ನಿಂತು ಬ್ಯಾಟ್ ಮಾಡಿ ಪತ್ರಕರ್ತರ ಪ್ರಶ್ನೆಗೆ ತಮ್ಮದೇ ದಾಟಿಯಲ್ಲಿ ಉತ್ತರಿಸಿದರು.
ಸುದ್ದಿಗೋಷ್ಠಿಗೆ ಹಾಜರಾದ ಪತ್ರಕರ್ತರ ಪೈಕಿ ಕೆಲವರು ಮೋದಿಯನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಮುಂದಾದರು. ಆದರೆ ಮೋದಿ ಮಾತ್ರ ಎಲ್ಲ ನಮ್ಮ ಅಧ್ಯಕ್ಷರೇ ಹೇಳುತ್ತಾರೆ. ನಮಗೆ ಅಧ್ಯಕ್ಷರೇ ಎಲ್ಲ. ನಾವು ಶಿಸ್ತು ಪಾಲಿಸುತ್ತೇವೆ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರೇ ಎಲ್ಲ ಪ್ರಶ್ನೆಗೂ ಉತ್ತರಿಸುತ್ತಾರೆ ಎನ್ನುವ ಮೂಲಕ ಜಾರಿಕೊಂಡರು.
ಅಷ್ಟಾದರೂ ಪತ್ರಕರ್ತರ ಕಣ್ಣು ಮಾತ್ರ ಮೋದಿ ಮೇಲೆ ಇತ್ತು. ಮತ್ತೊಬ್ಬ ಪತ್ರಕರ್ತರು 'ಈ ಪ್ರಶ್ನೆ ಮೋದಿ ಅವರಿಗೆ' ಎಂದು ಉದ್ದೇಶಪೂರ್ವಕವಾಗಿಯೇ ಕೇಳಿದ್ರು. ಅಷ್ಟರಲ್ಲಿ ಮಧ್ಯ ಮಾತನಾಡಿದ ಅಮಿತ್ ಶಾ ಎಲ್ಲದಕ್ಕೂ ಮೋದಿ ಅವರೇ ಉತ್ತರ ಕೊಡಬೇಕೆಂದೇನಿಲ್ಲ. ನಾವು ಶಿಸ್ತು ಪಾಲಿಸುತ್ತೇವೆ. ಏನಿದ್ದರೂ ನಾನೇ ಉತ್ತರಿಸುತ್ತೇನೆ ಎಂದು ಪರಿಸ್ಥಿತಿ ತಹಬದಿಗೆ ತಂದರು.