ಗಂಗಾವತಿ(ಕೊಪ್ಪಳ) : ತಾಲೂಕಿನ ಹನುಮನಹಳ್ಳಿಯ ಸಾರ್ವಜನಿಕ ಹಾಗೂ ಸರ್ಕಾರಿ ಜಾಗದಲ್ಲಿ ಬೆಳೆದಿದ್ದ ಹಲವು ಶ್ರೀಗಂಧದ ಮರಗಳಿಗೆ ದುಷ್ಕರ್ಮಿಗಳು ಕೊಡಲಿ ಪೆಟ್ಟು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ರಾತ್ರೋರಾತ್ರಿ ಕತ್ತರಿಸಿರುವ ಆರೋಪಿಗಳು, ಗಂಗಾವತಿ ಹಾಗೂ ಹೊಸಪೇಟೆಗೆ ಸಾಗಿಸಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಗ್ರಾಮದ ಈರಣ್ಣ ದೇವರ ಗುಂಡು ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ರೆಸ್ಟೋರೆಂಟ್‌ವೊಂದರ ಮಾಲೀಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಶ್ರೀಗಂಧದ ಮರ ಕತ್ತರಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಎಷ್ಟು ಪ್ರಮಾಣವಿದೆ, ಎಲ್ಲಿಗೆ ಸಾಗಿಸಲಾಗುತ್ತದೆ ಎಂಬ ಪೂರ್ಣ ಪ್ರಮಾಣದ ಪರಿಶೀಲನೆ ಬಳಿಕ ಇಲಾಖೆ ಅನುಮತಿ ಕೊಡುತ್ತದೆ. ಆದರೆ, ಯಾವುದೇ ಅನುಮತಿ ಇಲ್ಲದೆ ಕಳ್ಳರು ಮರಗಳನ್ನು ಕತ್ತರಿಸಿದ್ದಾರೆ. ಇದು ಸ್ಥಳಯರ ಆತಂಕಕ್ಕೆ ಕಾರಣವಾಗಿದೆ.