ವಿಶಾಖಪಟ್ಟಣ: ವಿಶ್ವಕಪ್ ತಂಡದ 15 ಸದಸ್ಯರ ತಂಡದಲ್ಲಿ ಅವಕಾಶ ವಂಚಿತನಾಗಿರುವ ರಿಷಭ್ ಪಂತ್ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ಕ್ರಿಕೆಟ್ ಲೋಕಕ್ಕೆ ತೋರಿಸಿದರು.
ನಿನ್ನೆ ನಡೆದ ಎಸ್ಆರ್ಹೆಚ್ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ನೊಂದಿಗೆ 48 ರನ್ ಸಿಡಿಸಿದ ಪಂತ್ ಭುವನೇಶ್ವರ್, ರಶೀದ್ ಖಾನ್, ಮೊಹಮ್ಮದ್ ನಬಿರಂತಹ ವಿಶ್ವಶ್ರೇಷ್ಠ ಬೌಲರ್ಗಳನ್ನು ದಂಡಿಸಿದರು. ಈ ಮೂಲಕ ತಾವು ವಿಶ್ವಶ್ರೇಷ್ಟ ಬೌಲರ್ಗಳನ್ನೂ ಎದುರಿಸಲು ಸಮರ್ಥನಿದ್ದೇನೆ ಎಂದು ಪ್ರದರ್ಶಿಸಿದರು.
ಶ್ರೇಷ್ಠ ಬೌಲರ್ಗಳ ಎದುರು ಕೂಡ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ, "ಪ್ರತಿದಿನ ನಮ್ಮ ತಂಡದ ಉತ್ತಮ ಬೌಲರ್ಗಳ ಜೊತೆ ಅಭ್ಯಾಸ ನಡೆಸುವುದರಿಂದ, ಬ್ಯಾಟಿಂಗ್ ನಡೆಸಲು ಸುಲಭವಾಯಿತು. ಅಲ್ಲದೆ ತಂಡಕ್ಕೆ ಈ ರೀತಿಯ ಪ್ರದರ್ಶನ ಅವಶ್ಯಕವಾಗಿರುತ್ತದೆ. ಹಾಗಂತ ನಾನೇನು ದೊಡ್ಡ ಹೊಡೆತಕ್ಕೆ ಕೈ ಹಾಕಲಿಲ್ಲ. ಸಮಯ ನೋಡಿ ಆಡಿದೆ. ಅಲ್ಲದೇ ನಾನು ಬೌಲರ್ ನೋಡಿ ಆಡುವುದಿಲ್ಲ, ಬಾಲ್ ಮಾತ್ರ ನೋಡುತ್ತೇನೆ" ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜತರಾದ ಪಂತ್ ಅಭಿಪ್ರಾಯಪಟ್ಟರು.
ಬಿಸಿಸಿಐ ಆಯ್ಕೆ ಸಮಿತಿ ಕೇವಲ ವಿಕೆಟ್ ಕೀಪಿಂಗ್ ದೃಷ್ಠಿಯಲ್ಲಿಟ್ಟುಕೊಂಡು ಯುವ ಕೀಪರ್ ಪಂತ್ ಬದಲಿಗೆ ದಿನೇಶ್ ಕಾರ್ತಿಕ್ಗೆ ವಿಶ್ವಕಪ್ ಆಡಲು ಅವಕಾಶ ನೀಡಿತ್ತು. ಆದರೆ, 12ನೇ ಆವೃತ್ತಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಜೊತೆಗೆ ಅತೀ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಆಗಿರುವ ಪಂತ್, ತಾವು ಯಾವ ಪ್ರತಿಭಾನ್ವಿತ ವಿಕೆಟ್ ಕೀಪರ್ಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಪಂತ್ 15 ಪಂದ್ಯಗಳಿಂದ 18 ಕ್ಯಾಚ್,2 ರನ್ಔಟ್ ಹಾಗೂ 6 ಸ್ಟಂಪ್ ಮಾಡುವ ಮೂಲಕ 24 ಬಲಿ ಪಡೆದು, ಧೋನಿ (13) ಡಿಕಾಕ್ (16) ರಂತ ಹಿರಿಯರನ್ನು ಹಿಂದಿಕ್ಕಿದ್ದಾರೆ. ಇದರ ಜೊತೆಗೆ 3 ಅರ್ಧಶತಕಗಳ ಜೊತೆಗೆ 450 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ ಕ್ವಾಲಿಫೈಯರ್ಗೇರಲು ನೆರವಾಗಿದ್ದರು.