ನವದೆಹಲಿ: ಜೆಟ್ ಏರ್ವೇಸ್ ಸಂಸ್ಥೆ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು, ಇದರ ನಡುವೆ ಹೆಚ್ಡಿಎಫ್ಸಿ ಬ್ಯಾಂಕ್ ತನಗೆ ಬರಬೇಕಿರುವ ಹಣವನ್ನು ಪಡೆಯಲು ಮುಂದಾಗಿದೆ.
ಹೆಚ್ಡಿಎಫ್ಸಿ ಬ್ಯಾಂಕಿಗೆ ಜೆಟ್ ಏರ್ವೇಸ್ ಸಂಸ್ಥೆ 414.80 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದಕ್ಕಾಗಿ ಬ್ಯಾಂಕ್ ಜೆಟ್ ಏರ್ವೇಸ್ನ ಮುಂಬೈನ ಬಾಂದ್ರಾದಲ್ಲಿರುವ 52,775 ಸ್ಕ್ವೇರ್ ಫೀಟ್ನ ಕಚೇರಿಯನ್ನು ಹರಾಜಿಗೆ ಇಟ್ಟಿದೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಮೂರನೇ ಅಂತಸ್ತಿನಲ್ಲಿರುವ ಜೆಟ್ ಏರ್ವೇಸ್ ಕಚೇರಿಗೆ 245 ಕೋಟಿ ಮೂಲ ಬೆಲೆ ನಿಗದಿಪಡಿಸಲಾಗಿದೆ. ಈಗಾಗಲೇ ಹರಾಜು ಸಂಬಂಧ ಸಾರ್ವಜನಿಕ ಸೂಚನೆ ನೀಡಲಾಗಿದೆ. ಸೂಚನೆಯ ಪ್ರಕಾರ ಮೇ 15ರಂದು ಆನ್ಲೈನ್ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
120ಕ್ಕೂ ಹೆಚ್ಚಿನ ವಿಮಾನಗಳನ್ನು ಹೊಂದಿರುವ ಜೆಟ್ ಏರ್ವೇಸ್ ಸಂಸ್ಥೆ ಏಪ್ರಿಲ್ 17ರಂದು ಕೊನೆಯದಾಗಿ ಕಾರ್ಯನಿರ್ವಹಿಸಿತ್ತು. ತುರ್ತು ಹೂಡಿಕೆದಾರರು ದೊರೆಯದ ಕಾರಣ ಹಣಕಾಸಿನ ಮುಗ್ಗಟ್ಟು ಮುಂದುವರೆದಿದೆ.