ದೊಡ್ಡಬಳ್ಳಾಪುರ: ಮೀಟರ್ ಬಡ್ಡಿ ಹಿನ್ನೆಲೆಯಲ್ಲಿ ಸಾಲಗಾರನ ಹಿಂಸೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತಪಸ್ಸಿಹಳ್ಳಿಯ ರೈತ ಸುಭಾಷ್ ಚಂದ್ರ (40) ನೇಣಿಗೆ ಶರಣಾದ ರೈತ. ತಪಸ್ಸಿಹಳ್ಳಿ ಮತ್ತು ಕೋಳೂರು ರಸ್ತೆಯಲ್ಲಿನ ತೋಟಕ್ಕೆಂದು ಬೆಳಗ್ಗೆ ಮನೆಯಿಂದ ಹೋದ ಸುಭಾಷ್ ಚಂದ್ರ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರೈತ ಸುಭಾಷ್ ಚಂದ್ರ ಹೈನುಗಾರಿಕೆ ಮತ್ತು ವ್ಯವಸಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ರೈತ ಸುಭಾಷ್ ಚಂದ್ರ, ಮನೆಯವರಿಗೆ ಗೊತ್ತಿಲ್ಲದೆ 2 ಲಕ್ಷ ಸಾಲ ಮಾಡಿದ್ದರಂತೆ. 2 ಲಕ್ಷ ಸಾಲಕ್ಕೆ 4 ಲಕ್ಷ ಬಡ್ಡಿಯನ್ನು ಬೆಂಗಳೂರು ಮೂಲದ ಸಂತೋಷ್ ಎಂಬುವವರಿಗೆ ಕೊಡಬೇಕಾಗಿತ್ತು. ವಾರಕ್ಕೆ 10 ಪರ್ಸೆಂಟ್ ಬಡ್ಡಿ ಹಣ ಕೊಡುವುದಾಗಿ ಒಪ್ಪಿ ಸಾಲವನ್ನು ಪಡೆದಿದ್ದರು. ಕೆಲವೇ ತಿಂಗಳಲ್ಲಿ 2 ಲಕ್ಷ ಸಾಲಕ್ಕೆ 4 ಲಕ್ಷ ಬಡ್ಡಿ ಬೆಳೆದಿತ್ತು. ಒಟ್ಟು 6 ಲಕ್ಷ ಹಣ ಕೊಡುವಂತೆ ಸಂತೋಷ್ ಕಿರುಕುಳ ಕೊಡುತ್ತಿದ್ದರು. ಮನೆಗೆ ಬಂದು ಅವಾಚ್ಯ ಶಬ್ಬಗಳಿಂದ ನಿಂದಿಸಿ ಹಣ ಕೊಡುವಂತೆ ಕಿರುಕುಳ ಕೋಡುತ್ತಿದ್ದರು. ಹಣ ಕೊಡದೇ ಹೋದಲ್ಲಿ ಕೈ ಕಾಲು ಮುರಿಯುವುದಾಗಿ ಎಚ್ಚರಿಕೆಯನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.
ಯಾವಾಗ ಸಾಲದ ವಿಷಯ ಮನೆಯವರಿಗೂ ಗೊತ್ತಾಯಿತೋ ಸುಭಾಷ್ ಮನಸಿಕವಾಗಿ ಕುಗ್ಗಿ ಹೋಗಿದ್ದರು. ತಮ್ಮನ್ನು ಹಿಂಬಾಲಿಸಿ ಬಂದ ಮಗನನ್ನು ವಾಪಾಸ್ಸು ಕಳುಹಿಸಿ ನೇಣಿಗೆ ಕೊರಳೊಡ್ಡಿದ್ದಾರೆ. ಬಡ್ಡಿ ನೀಡಿದ ಸಂತೋಷ ದಿನಕ್ಕೆ ಇಪ್ಪತ್ತು ಬಾರಿ ಪೋನ್ ಮಾಡಿ ಹಣಕೊಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಸಾಕಷ್ಟು ನೊಂದಿದ್ದ ಸುಭಾಷ್ ಚಂದ್ರ ಎರಡು ದಿನ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳುದ್ದಾಗಿ ನಿರ್ಧಾರ ಮಾಡಿದ್ದರು. ಸ್ನೇಹಿತರಿಗೆ ಪೋನ್ ಮಾಡಿ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಗಾಬರಿಗೊಂಡ ಸ್ನೇಹಿತರು ಸಾಲದ ಹಣ ತೀರಿಸುವ ಭರವಸೆ ನೀಡಿದ್ದಾರೆ. ಮನೆಯವರಿಗೂ ಸುಭಾಷ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ ಸ್ನೇಹಿತರು ಜಾಗೃತಿ ವಹಿಸಿದ್ದಾರೆ. ಇಂದು ಬೆಳಗ್ಗೆ ತೋಟಕ್ಕೆಂದು ಸುಭಾಷ್ ಸುಭಾಷ್ ಚಂದ್ರ ಹೊರಟಾಗ ಆತನ ಮಗ ತಂದೆಯನ್ನೇ ಹಿಂಬಾಲಿಸಿದ್ದಾನೆ. ಹಿಂದೆಯೇ ಬರುತ್ತಿದ್ದ ಮಗನನ್ನ ಬೈಯ್ದು ಸುಭಾಷ್ ಚಂದ್ರ ವಾಪಾಸ್ಸು ಕಳಿಸಿದ್ದಾರೆ. ಸುಬಾಷ್ ಚಂದ್ರ ಅವರ ಮಗ ನಿಖಿಲ್ ಮನೆಗೆ ಬಂದು ತನ್ನ ತಾಯಿಯನ್ನು ಕರೆದು ಕೊಂಡು ತೋಟಕ್ಕೆ ಹೋಗುವಷ್ಟರಲ್ಲಿ ಹಲಸಿನ ಮರಕ್ಕೆ ನೇಣಿಗೆ ಶರಣಾಗಿ ಬಿಟ್ಟಿದ್ದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಡ್ಡಿ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದ ಸಂತೋಷನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ದೊಡ್ಡಬಳ್ಳಾಪುರ ಸುತ್ತಮುತ್ತ ಮೀಟರ್ ದಂಧೆ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಬೆಂಗಳೂರು ಮೂಲದ ವ್ಯಕ್ತಿಗಳು ಮೀಟರ್ ಬಡ್ಡಿಯಲ್ಲಿ ಹಣವನ್ನು ಕೊಡುತ್ತಿದ್ದು, ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಹಣ ಕೊಡದವರಿಗೆ ರೌಡಿಗಳ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ ಎಂಬ ಆರೋಪಿಗಳೂ ಕೇಳಿಬರುತ್ತಿವೆ.