ಕೊಪ್ಪಳ: ಕರ್ತವ್ಯದಲ್ಲಿದ್ದ ಲೈನ್ಮೆನ್ ಮೇಲೆ ವಿದ್ಯುತ್ ಪರಿವರ್ತಕ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗಾಯಗೊಂಡ ಲೈನ್ಮೆನ್ ಸಂಬಂಧಿಕರು ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ಏಪ್ರಿಲ್ 27ರಂದು ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ ಕೆಳಗೆ ಇಳಿಸಲಾಗುತ್ತಿತ್ತು. ಕರ್ತವ್ಯದಲ್ಲಿದ್ದ ಚೋಳಪ್ಪ ಬೀಸಲದಿನ್ನಿ ಸೇರಿದಂತೆ ಇನ್ನಿತರ ಲೈನ್ಮೆನ್ಗಳು 100 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಲಾರಿಯಿಂದ ಕೆಳಗೆ ಇಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆ ವಿದ್ಯುತ್ ಪರಿವರ್ತಕ ಲೈನ್‌ಮನ್ ಚೋಳಪ್ಪ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಚೋಳಪ್ಪ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಚೋಳಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಘಟನೆ ನಡೆದು, ಸಿಬ್ಬಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾನಿರತ ಲೈನ್ಮನ್ ಚೋಳಪ್ಪ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಟಿಸಿಯನ್ನು ಲಾರಿಯಿಂದ ಕೆಳಗೆ ಇಳಿಸಲು ಕ್ರೇನ್ ಬಳಕೆ ಮಾಡಬೇಕು. ಆದರೆ, ಇಲ್ಲಿ ಸಿಬ್ಬಂದಿಯನ್ನು ಬಳಸಿಕೊಂಡು ಇಂತಹ ಅಪಾಯಕಾರಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ದುರ್ಘಟನೆ ನಡೆದರೂ ಸಹ ಸಂಬಂಧಿಸಿದ ಸೆಕ್ಷನ್ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಲೈನ್ಮನ್ ಚೋಳಪ್ಪ ಅವರ ಸಹೋದರಿ ಡಾ. ಚಂದ್ರಕಲಾ ಆಗ್ರಹಿಸಿದ್ದಾರೆ.
ಜೆಸ್ಕಾಂನ ಯಾವ ಸಿಬ್ಬಂದಿಯೂ ಇನ್ಮೇಲೆ ಇಂತಹ ಸಂಕಷ್ಟಕ್ಕೆ ಸಿಲುಕಬಾರದು. ಸುರಕ್ಷತೆಯ ಉಪಕರಣಗಳನ್ನು ಜೆಸ್ಕಾಂ ಒದಗಿಸಬೇಕು ಹಾಗೂ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.