ಲಂಡನ್: ಕಳೆದೆರಡು ವರ್ಷಗಳಿಂದ ಇಂಗ್ಲೆಂಡ್ ತಂಡದಲ್ಲಿ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಜೋಫ್ರಾ ಆರ್ಚರ್ಗೆ ಒಂದೇ ತಿಂಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಆಡಿದ್ದಲ್ಲದೆ ವಿಶ್ವಕಪ್ನ 15ರ ತಂಡದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.
ವಿಶ್ವದ ಹಲವು ಟಿ-20 ಲೀಗ್ಗಳಲ್ಲಿ ಅದ್ಭುತ ಪ್ರದರ್ಶನ ತೋರಿದರೂ ರಾಷ್ಟ್ರೀಯ ತಂಡದ ಅವಕಾಶಕ್ಕಾಗಿ ಕಾಯುತ್ತಿದ್ದರು. ಆರ್ಚರ್ ವಿಂಡೀಸ್ನಿಂದ 2015ರಲ್ಲಿ ಇಂಗ್ಲೆಂಡ್ಗೆ ಬಂದು ನೆಲೆಸಿದ್ದರು. ಅಲ್ಲಿನ ನಿಯಮದ ಪ್ರಕಾರ 3 ವರ್ಷ ಇಂಗ್ಲೆಂಡ್ನಲ್ಲಿ ನೆಲೆಸಿದವರಿಗೆ ಮಾತ್ರ ರಾಷ್ಟ್ರೀಯ ತಂಡದಲ್ಲಿ ಅವಕಾಶವಿದ್ದರಿಂದ ರಾಷ್ಟ್ರೀಯ ತಂಡದ ಕನಸು ನನಸಾಗಲು 4 ವರ್ಷ ಬೇಕಾಯಿತು. ಸಸೆಕ್ಸ್, ಬಿಗ್ಬ್ಯಾಷ್, ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಪ್ರಾಥಮಿಕ 15 ಸದಸ್ಯರ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಇದೀಗ ಪಾಕಿಸ್ತಾನ ವಿರುದ್ಧ ಆಲ್ರೌಂಡರ್ ಡೇವಿಡ್ ವಿಲ್ಲೆ ನಿರೀಕ್ಷಿತ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಆರ್ಚರ್ಗೆ ಅವಕಾಶ ದೊರೆಕಿದೆ. ಇವರ ಜೊತೆಗೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್ ಬದಲಿಗೆ ಜೇಮ್ಸ್ ವಿನ್ಸ್ ಹಾಗೂ ಜೋ ಡೆನ್ಲಿ ಬದಲಿಗೆ ಲೈಮ್ ಡೇವ್ಸನ್ ಅವಕಾಶ ಪಡೆದುಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಜೋಫ್ರಾ ಆರ್ಚರ್ ಹಾಗೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೇಮ್ಸ್ ವಿನ್ಸ್ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆರ್ಚರ್ 4.8 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದರು. ಉಳಿದ ಎಲ್ಲಾ ಬೌಲರ್ಗಳು 6ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಇನ್ನು ವಿನ್ಸ್ 2 ಪಂದ್ಯಗಳಲ್ಲಿ 76 ರನ್ ಗಳಿಸಿದ್ದರು.