ಬೆಂಗಳೂರು: ಕೋವಿಡ್ ಪಿಡುಗು ತೀವ್ರವಾಗಿದ್ದು, ಇಡೀ ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ಹೀಗಾಗಿ ಈ ಬಾರಿ ಯಾರೂ ನನ್ನ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಬಂಧು - ಬಳಗದವರಿಗೆ ಪತ್ರಿಕಾ ಹೇಳಿಕೆಯಲ್ಲಿ ಶಿವಕುಮಾರ್ ಅವರು ಗುರುವಾರ ಮಾಡಿರುವ ಮನವಿ ಮಾಡಿದ್ದು, ರಾಜ್ಯ ತೀವ್ರ ಸಂಕಷ್ಟ ಸಮಯ ಎದುರಿಸುತ್ತಿದೆ. ಕೊರೊನಾ ರುದ್ರತಾಂಡವ ಆಡುತ್ತಿದೆ. ಈ ಸಮಯದಲ್ಲಿ ಸಂಭ್ರಮಾಚರಣೆ ಹಿತವಲ್ಲ. ಹೀಗಾಗಿ ಈ ಬಾರಿ ನಾನೂ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ನೀವೂ ಸಹ ನನ್ನ ಜನ್ಮದಿನ ಆಚರಿಸುವುದಾಗಲಿ, ಶುಭಾಶಯ ಕೋರುವುದಾಗಲಿ, ಶುಭಾಶಯ ಕೋರಲು ದೂರವಾಣಿ ಕರೆ ಮಾಡುವುದಾಗಲಿ ಬೇಡ ಎಂದಿದ್ದಾರೆ.
ನಾನು ಆ ದಿನ ಊರಲ್ಲಿ ಇರುವುದಿಲ್ಲ. ಹೀಗಾಗಿ ಯಾರೂ ಕೂಡ ಶುಭಾಶಯ ಕೋರಲು ನಿವಾಸದ ಬಳಿ ಬರುವುದು ಬೇಡ. ಮಾಧ್ಯಮಗಳಲ್ಲಿ ನನಗೆ ಶುಭಾಶಯ ಕೋರಿ ಯಾರೊಬ್ಬರೂ ಜಾಹೀರಾತು ನೀಡಬಾರದು. ಪರಿಸ್ಥಿತಿಯ ಗಂಭೀರತೆ ಅರಿತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯಾರು ಕೂಡ ಈ ವಿಚಾರದಲ್ಲಿ ತಪ್ಪು ಭಾವಿಸಬಾರದು. ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮೇ 15ರಂದು 59ನೇ ವರ್ಷಕ್ಕೆ ಕಾಲಿರಿಸುತ್ತಿರುವ ಡಿ.ಕೆ ಶಿವಕುಮಾರ್ ಸರಳವಾಗಿ ಹುಟ್ಟುಹಬ್ಬವನ್ನು ಬೆಂಗಳೂರು ಹೊರಭಾಗದಲ್ಲಿ ಆಚರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಕೋವಿಡ್ ಆತಂಕ ಇರುವ ಹಿನ್ನೆಲೆ ಕಳೆದ ವರ್ಷ ಸಹ ಅವರು ತಮ್ಮ ಹುಟ್ಟು ಹಬ್ಬವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಹಿನ್ನೆಲೆ ಈ ವರ್ಷವೂ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಬಹಳ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ಇದು ತೀವ್ರ ನಿರಾಸೆ ಉಂಟು ಮಾಡಿದೆ.