ಮುಂಬೈ: ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ತೀವ್ರ ಉಸಿರಾಟ ಸಮಸ್ಯೆ ಉಂಟಾಗಿದ್ದು ನಗರದ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ದಿಲೀಪ್ ಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರು ದಿನನಿತ್ಯದ ತಪಾಸಣೆ ಮತ್ತು ಪರೀಕ್ಷೆಗೆ ಒಳಗಾಗುತ್ತಿದ್ದರು ಎನ್ನಲಾಗಿದೆ.
ಬಾಲಿವುಡ್‌ನ ಈ ಹಿರಿಯ ನಟ ಚಿತ್ರರಂಗದಲ್ಲಿ ಆರು ದಶಕಗಳನ್ನು ಪೂರೈಸಿದ್ದಾರೆ. 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ದೇವದಾಸ್ (1955), ನಯಾ ದೌರ್ (1957), ಮೊಘಲ್-ಎ-ಅಜಮ್ (1960), ಗಂಗಾ ಜಮುನಾ (1961), ಕ್ರಾಂತಿ (1981) ಅವರ ನಟನೆಯ ಪ್ರಮುಖ ಚಲನಚಿತ್ರಗಳಾಗಿವೆ.
1994ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗು 2015 ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.